ಬಾಣಂತಿಯರ ಸಾವು, ದಾರಿ ತಪ್ಪಿಸಿ ನುಣುಚಿಕೊಳ್ಳುತ್ತಿರುವ ಆರೋಗ್ಯ ಸಚಿವರು ಕೆ ಆರ್ ಎಸ್ ಪಕ್ಷದ ಆರೋಪ
ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ಯುವ ಮುಖಂಡ ನಿರುಪಾದಿ ಕೆ ಗೋಮರ್ಸಿ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ನಿರಂತರವಾಗಿ ಬಾಣಂತಿಯರು ಮತ್ತು ರೋಗಿಗಳು ಸರಣಿಯಾಗಿ ಸಾವಿಗೀಡಾಗುತ್ತಿದ್ದಾರೆ. ಇದು ರಾಜ್ಯದ ಸರ್ಕಾರಿ ಆರೋಗ್ಯ ವ್ಯವಸ್ಥೆಯು ತಲುಪಿರುವ ಅಧೋಗತಿಯನ್ನು ತೋರಿಸುತ್ತದೆ. ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಬಾಣಂತಿಯರ ಸರಣಿ ಸಾವು ನಡೆದಿದ್ದು, ಇದಕ್ಕೆ ಕಳಪೆ ಗುಣಮಟ್ಟದ ಔಷಧ, ವೈದ್ಯರ ನಿರ್ಲಕ್ಷ್ಯ, ಸರ್ಕಾರಿ ಆಸ್ಪತ್ರೆಗಳಲ್ಲಿನ ಅವ್ಯವಸ್ಥೆ, ಅಕ್ರಮ ಹಾಗು ಭ್ರಷ್ಟಾಚಾರ ಪ್ರಮುಖ ಕಾರಣಗಳು. ಇದು ರಾಜ್ಯದಲ್ಲಿ ಈಗಿನ ಕಾಂಗ್ರೆಸ್ ಸರ್ಕಾರ ಮತ್ತು ಹಿಂದಿನ ಸರ್ಕಾರಗಳು ಆರೋಗ್ಯ ಇಲಾಖೆಯಲ್ಲಿ ನಡೆಸಿರುವ ಭ್ರಷ್ಟಾಚಾರ ಮತ್ತು ದುರಾಡಳಿತವನ್ನು ತೋರಿಸುತ್ತದೆ. ರಾಯಚೂರು ಜಿಲ್ಲೆಯಲ್ಲಿ ಇಲ್ಲಿಯವರೆಗೆ 12 ಬಾಣಂತಿಯರು ಮೃತಪಟ್ಟಿದ್ದು, ಸರ್ಕಾರಿ ಆಸ್ಪತ್ರೆಗಳಿಗೆ ಬರಲು ಗರ್ಭಿಣಿಯರು ಅಂಜುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಬಡವರು ಮತ್ತು ಶೋಷಿತ ವರ್ಗದವರು ವಿಧಿಯಿಲ್ಲದೆ ಸರ್ಕಾರಿ ಆಸ್ಪತ್ರೆಗಳಿಗೆ ಬರುತ್ತಿದ್ದಾರೆ, ಸಾಲ-ಸೋಲ ಮಾಡಿ, ಮನೆ-ಮಠ ಮಾರಿ ಖಾಸಗಿ ಆಸ್ಪತ್ರೆಗಳಿಗೆ ಹೋಗಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ಬಡವರ ಜೀವಕ್ಕೆ ಬೆಲೆ ಇಲ್ಲದಂತಾಗಿದ್ದು, ರಾಜ್ಯ ಸರ್ಕಾರವು ಬಹಳ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ. ಆಸ್ಪತ್ರೆಗಳಲ್ಲಿ ಸಾವುಗಳಾಗುತ್ತಿದ್ದರೆ, ಮತ್ತೊಂಡೆ ಇವೆಲ್ಲವನ್ನು ತಡೆಯಬೇಕಾಗಿದ್ದ ಮಂತ್ರಿಗಳು, ಇದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲವೆಂದು ಬೆಂಗಳೂರಿನಲ್ಲಿ ಅಧಿಕಾರ ಉಳಿಸಿಕೊಳ್ಳುವ ಮತ್ತು ಕಿತ್ತುಕೊಳ್ಳುವ ಔತಣದಲ್ಲಿ / ಸಭೆಗಳಲ್ಲಿ ಮುಳುಗಿದ್ದಾರೆ. ರಾಜ್ಯದಲ್ಲಿ ನಡೆದಿರುವ ತಾಯಂದಿರ ಸಾವಿನಲ್ಲಿ ಶೇ 80ರಷ್ಟು ಸರ್ಕಾರಿ ಆಸ್ಪತ್ರೆಗಳಲ್ಲಿ ವರದಿಯಾಗಿದೆ. ಇವರಲ್ಲಿ ಬಹುತೇಕರು ಶೋಷಿತ ಮತ್ತು ಬಡ ವರ್ಗದವರೆ ಆಗಿದ್ದಾರೆ. ಮಾತು ಮಾತಿಗೂ ಶೋಷಿತರ ಬಗ್ಗೆ ಮಾತನಾಡುವ ಕಾಂಗ್ರೆಸ್ ಪಕ್ಷವು ಶೋಷಿತ ವರ್ಗಕ್ಕೆ ನೀಡುತ್ತಿರುವುದು ಸಾವಿನ ಭಾಗ್ಯವಾಗಿದೆ. ರಾಜ್ಯ ಸರ್ಕಾರವು ತನ್ನ ಸಾಧನೆಯಲ್ಲಿ ಪ್ರಮುಖವಾಗಿ ಹೇಳುವುದು ಭಾಗ್ಯಗಳ ವಿಚಾರವನ್ನು, ಅದರಲ್ಲೂ ಪ್ರಮುಖವಾಗಿ ಗೃಹಲಕ್ಷ್ಮಿ ಮತ್ತು ಶಕ್ತಿ ಯೋಜನೆಯನ್ನು ಮೇಲಿಂದ ಮೇಲೆ ಪ್ರಚಾರ ಮಾಡಿ ಅದರ ಸುತ್ತಲೇ ಗಿರಕಿ ಹೊಡೆಯುತ್ತಿದೆ, ಆದರೆ ಬಾಣಂತಿಯರ ಸಾವುಗಳು ಹೀಗೆಯೇ ಮುಂದುವರೆದರೆ, ಈ ಯಾವ ಭಾಗ್ಯವೂ ಪ್ರಯೋಜನಕ್ಕೆ ಬರುವುದಿಲ್ಲ.
ಈ ಸಾವುಗಳ ಬಗ್ಗೆ ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕಾದ ಆರೋಗ್ಯ ಮಂತ್ರಿಗಳಾದ ದಿನೇಶ್ ಗುಂಡೂರಾವ್ ಅವರು ತಮ್ಮ ಲೋಪವನ್ನು, ಇಲಾಖೆಯಲ್ಲಿನ ಭ್ರಷ್ಟಾಚಾರವನ್ನು ಮರೆಮಾಚಲು, ಜನರ ದಾರಿ ತಪ್ಪಿಸುವ ಮತನಾಡುತ್ತಿದ್ದಾರೆ. ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಕಳೆದ ಆಗಸ್ಟ್ ನಿಂದ ಇಲ್ಲಿಯವರೆಗೆ 60ಕ್ಕೂ ಹೆಚ್ಚು ಬಾಣಂತಿಯರ ಸಾವುಗಳು ಸಂಭವಿಸಿವೆ. ಕಳೆದ ಫೆಬ್ರವರಿಯಲ್ಲಿ ಪಾವಗಡದಲ್ಲಿ 3 ತಾಯಂದಿರು ಶಸ್ತ್ರ ಚಿಕಿತ್ಸೆಯ ನಂತರ ಸೋಂಕು ತಗುಲಿ ಸಾವಿಗೀಡಾಗಿದ್ದರು, ನಂತರ ರಾಯಚೂರಿನ ಸಿಂಧನೂರಿನ ತಾಲ್ಲೂಕು ಆಸ್ಪತ್ರೆಯಲ್ಲಿ ಅಕ್ಟೋಬರ್ 21, 2024ರಲ್ಲಿ ಆರಂಭವಾದ ಸಾವಿನ ಸರಣಿ ಮುಂದುವರೆಯುತ್ತಲ್ಲೇ ಇದ್ದು, ರಾಯಚೂರು ಜಿಲ್ಲೆಯಲ್ಲಿ ಅಕ್ಟೋಬರ್ ನಿಂದ ಇಲ್ಲಿಯವರೆಗೆ 12 ಬಾಣಂತಿಯರು ಸಾವಿಗೀಡಾಗಿದ್ದಾರೆ. ರಾಯಚೂರು ಜಿಲ್ಲೆಯಲ್ಲಿನ ಬಾಣಂತಿಯರ ಸಾವಿಗೆ ಏನು ಕಾರಣ ಎಂದು ಇಲ್ಲಿಯವರೆಗೂ ತಿಳಿದುಬಂದಿಲ್ಲ. ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿನ ನಾಲ್ವರು ಬಾಣಂತಿಯರ ಸಾವಿನ ನಂತರ ರಾಜ್ಯ ಸರ್ಕಾರವು ಐಎಎಸ್ ಅಧಿಕಾರಿ ಕನಗವಲ್ಲಿ ಅವರ ನೇತೃತ್ವದಲ್ಲಿ ಪರಿಶೀಲನಾ ತಂಡವನ್ನು ರಚಿಸಿ, ಒಂದು ವಾರದ ಒಳಗೆ ವರದಿ ನೀಡಲು ತಿಳಿಸಲಾಗಿತ್ತು, ಆದರೆ ಇದುವರೆಗೂ ಆ ತಂಡ ವರದಿ ನೀಡಿದೆಯೆ, ಇಲ್ಲವೇ ಅಥವಾ ನೀಡಿದ್ದರೆ ಆ ಸಾವುಗಳಿಗೆ ಏನು ಕಾರಣ ಮತ್ತು ಅವುಗಳಿಗೆ ಯಾರು ಹೊಣೆ ಎಂದು ತಿಳಿಸಲಾಗಿದೆಯೆ ಇಲ್ಲವೇ ಎಂದು ತಿಳಿದು ಬಂದಿಲ್ಲ. ವರದಿ ನೀಡಿದ್ದರೆ ಸರ್ಕಾರ, ಆ ವರದಿಯ ಆಧಾರದ ಮೇಲೆ ಏನು ಕ್ರಮ ಕೈಗೊಂಡಿದೆ? ಹಾಗೆಯೆ, ಈ ವಿಚಾರವಾಗಿ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚಿಸಿ, ವರದಿ ಪಡೆಯಲಾಗುವುದು ಎಂದು ಬೆಳಗಾವಿ ಚಳಿಗಾಲದ ಅಧಿವೇಶನದ ಸಮಯದಲ್ಲಿ ಮುಖ್ಯಮಂತ್ರಿಗಳು ಮಾಧ್ಯಮಗಳಿಗೆ ತಿಳಿಸಿದ್ದರು. ಈ ಸಮಿತಿರಚಿಸಲಾಯಿತೆ? ರಚಿಸಿದ್ದರೆ ಯಾವಾಗ ವರದಿ ನೀಡಿದೆ? ಅದರಲ್ಲಿ ಏನಿದೆ? ತಕ್ಷಣವೇ ಬಹಿರಂಗಪಡಿಸಿ.
ಇವೆಲ್ಲವನ್ನು ಗಮನಿಸಿದರೆ, ರಾಜ್ಯದ ಆರೊಗ್ಯ ಇಲಾಖೆಯು ಕುಂಭಕರ್ಣನ ನಿದ್ರೆಯಲ್ಲಿದ್ದು, ಸರಣಿ ಸಾವಿನ ನಂತರವೂ ಎಚ್ಚರಗೊಂಡಂತೆ ಕಾಣುತ್ತಿಲ್ಲ. ಬಳ್ಳಾರಿ ಪ್ರಕರಣದ ನಂತರ, ರಾಜ್ಯದ ಔಷಧ ನಿಯಂತ್ರಕರನ್ನು ಅಮಾನತು ಮಾಡಲಾಯಿತು, ಆದರೆ, ಇದರಲ್ಲಿ ಅವರ ಪಾತ್ರವೇನು ಎಂಬ ಬಗ್ಗೆ ಸರ್ಕಾರದಿಂದ ವಿವರಣೆ ಇಲ್ಲ. ಇದು ಆರೋಗ್ಯ ಮಂತ್ರಿಯವರು ಇತ್ತೀಚೆಗೆ ನೀಡುತ್ತಿರುವ ವಿವರಣೆಗೆ ತದ್ವಿರುದ್ದವಾಗಿದೆ. ಆರೋಗ್ಯ ಮಂತ್ರಿ ದಿನೇಶ್ ಗುಂಡೂರಾವ್ ಅವರು ಇತ್ತೀಚೆಗೆ ಪತ್ರಿಕೆಯೊಂದಕ್ಕೆ ಲೇಖನ ಬರೆದು ಮತ್ತು ಮೊನ್ನೆ ಒಕ್ಕೂಟ ಸರ್ಕಾರದ ಆರೋಗ್ಯ ಸಚಿವರಿಗೆ ಬರೆದಿರುವ ಪತ್ರದಲ್ಲಿ, ರಾಜ್ಯದಲ್ಲಿ ಪರೀಕ್ಷೆಗೊಳಪಡುವ ಔಷಧಿಗಳು ಕಳಪೆ ಎಂದು ಕಂಡುಬಂದ ಸಂದರ್ಭದಲ್ಲಿ, ಆ ಔಷಧಿ ತಯಾರಿಕಾ ಕಂಪನಿಗಳ ಮೇಲೆ ಕ್ರಮವನ್ನು ತೆಗೆದುಕೊಳ್ಳುವ ಅಥವಾ ಅಂತಹ ಔಷಧಿಗಳ ಮಾರಾಟವನ್ನು ನಿರ್ಭಂಧಿಸುವ ಯಾವ ಅಧಿಕಾರವೂ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ತಿಳಿಸಿದ್ದಾರೆ. ಹಾಗಾದರೆ, ಈ ಸಾವುಗಳಿಗೂ ಔಷಧ ನಿಯಂತ್ರಕರಿಗೂ ಏನು ಸಂಬಂಧವಿದೆ? ಅವರೇ ತಿಳಿಸಿರುವಂತೆ, ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ ಪರೀಕ್ಷೆಗೆ ಒಳಪಡಿಸಲಾದ 894 ಔಷಧಿಗಳ ಮಾದರಿಗಳಲ್ಲಿ 601, ಅಂದರೆ ಶೇ 67 ರಷ್ಟು ಔಷಧಿಗಳು ಕಳಪೆಯವು ಎಂದು ಕಂಡು ಬಂದಿದೆ. ಇದು ಬಹಳ ಕಳವಳಕಾರಿಯಾದ ಹಾಗೂ ಗಂಭೀರವಾದ ವಿಚಾರ. ಈ ಮಾಹಿತಿಯು ಆರೋಗ್ಯ ಸಚಿವರಿಗೆ ಮೊದಲೇ ತಿಳಿದಿರಲಿಲ್ಲವೇ? ತಿಳಿದಿದ್ದರೆ, ಇಲ್ಲಿಯ ತನಕ ಈ ಬಗ್ಗೆ ಏನೇನು ಕ್ರಮ ಕೈಗೊಳ್ಳಲಾಗಿದೆ?
ರಾಯಚೂರು ಜಿಲ್ಲೆಯ ವಿಚಾರಕ್ಕೆ ಬರುವುದಾದರೆ, ಅಕ್ಟೋಬರ್ ನಿಂದಲೇ ಜಿಲ್ಲೆಯಲ್ಲಿ ಬಾಣಂತಿಯರ ಸಾವು ಸಂಭವಿಸುತ್ತಿದೆ, ಆದರೂ ಕೂಡ ಜಿಲ್ಲಾಡಳಿತವಾಗಲಿ ಅಥವಾ ಆರೋಗ್ಯ ಇಲಾಖೆಯಾಗಲಿ ಅಥವಾ ವೈದ್ಯಕೀಯ ಶಿಕ್ಷಣ ಇಲಾಖೆಗಳು ಯಾವುದೇ ಕ್ರಮಗಳನ್ನು ಕೈಗೊಳ್ಳಲ್ಲಿಲ್ಲ. ಇನ್ನು ಬಳ್ಳಾರಿಯಲ್ಲಿ ಮೃತರಾದ ಬಾಣಂತಿಯರ ಕುಟುಂಬಕ್ಕೆ ಸರ್ಕಾರವು, ಈ ವಿಚಾರವನ್ನು ತಣ್ಣಗಾಗಿಸಲು ತಕ್ಷಣವೇ 5 ಲಕ್ಷ ಪರಿಹಾರ ಘೋಷಣೆ ಮಾಡಿತು, ಆದರೆ, ರಾಯಚೂರಿನಲ್ಲಿ ಸಂಭವಿಸಿರುವ ಸಾವುಗಳ ಬಗ್ಗೆ ಯಾವುದೇ ಚಕಾರವಿಲ್ಲ. ಈ ವಿಚಾರಗಳ ಬಗ್ಗೆ ಗಮನ ನೀಡಬೇಕಾದ ಸ್ಥಳೀಯ ಜನಪ್ರತಿನಿಧಿಗಳು ಕೂಡ ಗಾಢ ನಿದ್ರೆಗೆ ಜಾರಿದ್ದು, ಇವರುಗಳು ಎಚ್ಚೆತ್ತುಕೊಳ್ಳಲು ಮತ್ತೊಂದು ಚುನಾವಣೆ ಬರಬೇಕಾಗಿದೆ.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದವು ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ, ಅಲ್ಲಿನ ಅವ್ಯವಸ್ಥೆ ಹಾಗು ಭ್ರಷ್ಟಾಚಾರವನ್ನು ಬಯಲು ಮಾಡುವ ಕೆಲಸವನ್ನು ಮಾಡುತ್ತಾ ಬಂದಿದೆ. ಇಂತಹ ಸಂದರ್ಭದಲ್ಲಿ, ತಮ್ಮ ಅಕ್ರಮಗಳನ್ನು ಮುಚ್ಚಿಕೊಳ್ಳಲು, ಪೊಲೀಸರ ಸಹಾಯದೊಂದಿಗೆ, ಪಕ್ಷದ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಬೆದರಿಸುವ ಕೆಲಸ ಮಾಡಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳ ದುಸ್ಥಿತಿ ಯಾವ ಮಟ್ಟದಲ್ಲಿ ಇದೆ ಎಂದರೆ, ಕೇವಲ ಅಲ್ಲಿನ ಶೌಚಾಲಯಗಳು ಮಾತ್ರ ಗಬ್ಬು ನಾರುವುದಿಲ್ಲ, ಅಲ್ಲಿ ಶಸ್ತ್ರಚಿಕಿತ್ಸೆಗೆ ಬಳಸಲಾಗುವ ನೀರಿನ ಟ್ಯಾಂಕ್‍ಗಳು ಕೂಡ ಗಬ್ಬು ನಾರುವ ಸ್ಥಿತಿಯಲ್ಲಿವೆ ಎಂದು ಮಹಿಳಾ ಆಯೋಗದ ಅಧ್ಯಕ್ಷರ ವರದಿಯಲ್ಲಿ ತಿಳಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಬಡ ಜನರಿಂದ ಸುಲಿಗೆ ಮಾಡಲಾಗುತ್ತಿದ್ದು, ಈ ಬಗ್ಗೆ ದೂರು ನೀಡಿದರೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇಲ್ಲಿ ಸರ್ಕಾರದಿಂದ ಸರಬರಾಜಾಗುವ ಔಷಧಿಗಳನ್ನು ರೋಗಿಗಳಿಗೆ ನೀಡದೆ, ಚೀಟಿ ಬರೆದು ಹೊರಗಿನಿಂದ ಕೊಂಡುಕೊಳ್ಳಲು ತಿಳಿಸಲಾಗುತ್ತಿದೆ. ಇಲ್ಲಿನ ವೈದ್ಯರುಗಳು, ಸಮಯಕ್ಕೆ ಸರಿಯಾಗಿ ಹಾಜರಾಗದೆ, ತಮ್ಮ ಖಾಸಗಿ ಕ್ಲಿನಿಕ್‍ಗಳಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಇನ್ನು ಸರ್ಕಾರದಿಂದ ಬಿಡುಗಡೆಯಾಗುವ ಅನುದಾನ ಹಾಗು ಸ್ಥಳೀಯವಾಗಿ ಸಂಗ್ರಹವಾಗುವ ಶುಲ್ಕಗಳಿಂದ ವಾರ್ಷಿಕವಾಗಿ ಹತ್ತಾರು ಲಕ್ಷ ಹಣ ಆಸ್ಪತ್ರೆಗಳಿಗೆ ಬರುತ್ತಿದೆ, ಆದರೆ, ಇದ್ಯಾವುದು ಸಮರ್ಪಕವಾಗಿ ಬಳಕೆಯಾಗದೆ, ಸಂಪೂರ್ಣವಾಗಿ ದುರ್ಬಳಕೆಯಾಗುತ್ತಿದ್ದು, ಇದ್ಯಾವುದಕ್ಕೂ ಲೆಕ್ಕವೇ ಇಲ್ಲದಂತಾಗಿದೆ. ಆಸ್ಪತ್ರೆಗಳಲ್ಲಿ ಮತ್ತು ಆರೋಗ್ಯ ಇಲಾಖೆಯ ಮಟ್ಟದಲ್ಲಿ ನಡೆಯುವ ಖರೀದಿಯಲ್ಲಿ ವ್ಯಾಪಕ ಅಕ್ರಮಗಳು ನಡೆಯುತ್ತಿದ್ದು, ಇದ್ಯಾವುದರ ಬಗ್ಗೆಯೂ ಕ್ರಮ ಕೈಗೊಳ್ಳದೆ ದಿವ್ಯ ನಿರ್ಲಕ್ಷ್ಯ ವಹಿಸಲಾಗಿದೆ. ಇಲ್ಲಿಯವರೆಗೆ ಈ ವಿಚಾರಗಳ ಬಗ್ಗೆ ಎಷ್ಟು ದೂರು ಬಂದಿದೆ ಮತ್ತು ಯಾವ ಪ್ರಕರಣದಲ್ಲಿ ಕ್ರಮ ಗೈಗೊಳ್ಳಲಾಗಿದೆ ಎಂಬ ಮಾಹಿತಿ ಬಹಿರಂಗ ಮಾಡಿದರೆ, ಯಾವ ರೀತಿಯಲ್ಲಿ ಇಲಾಖೆಯು ಕುಂಭಕರ್ಣನ ನಿದ್ರೆಯಲ್ಲಿದೆ ಎಂದು ತಿಳಿಯುತ್ತದೆ.
ಈ ಎಲ್ಲಾ ವಿಚಾರಗಳನ್ನು ಮರೆಮಾಚಲು, ಆರೋಗ್ಯ ಸಚಿವರು ಜನರನ್ನು ದಾರಿ ತಪ್ಪಿಸುವ ಕೆಲಸ ಆರಂಭಿಸಿದ್ದು, ಇದಕ್ಕೆಲ್ಲ ಒಕ್ಕೂಟ ಸರ್ಕಾರದ ಕಾಯ್ದೆಯೆ ಕಾರಣ ಎಂದು ದೂರಲು ಆರಂಭಿಸಿದ್ದಾರೆ. ಈ ಬಗ್ಗೆ ಪತ್ರಿಕೆಯಲ್ಲಿ ಲೇಖನ ಬರೆದು ಮತ್ತು ಇತ್ತೀಚೆಗೆ ಕೆಂದ್ರ ಆರೋಗ್ಯ ಸಚಿವರಿಗೆ ಬತ್ರ ಬರೆದು, ಕ್ರಮ ವಹಿಸಲು ಮನವಿ ಮಾಡಿದ್ದಾರೆ. ಈ ವಿಚಾರವು ಅರ್ಧ ಸತ್ಯದಿಂದ ಕೂಡಿದ್ದು, ತಮ್ಮ ಲೋಪವನ್ನು ಮುಚ್ಚಿಕೊಳ್ಳಲು ಬೇರೊಬ್ಬರತ್ತ ಬೊಟ್ಟು ಮಾಡಿ, ತಮ್ಮ ಜವಾಬ್ದಾರಿಯಿಂದ ನುಣಿಚಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಬಳ್ಳಾರಿ ಪ್ರಕರಣದಲ್ಲಿ ಕಳಪೆ ಗುಣಮಟ್ಟದ ಔಷಧಿಯಿಂದ ತಾಯಂದಿರ ಸಾವಾಗಿರುವುದು ಧೃಢಪಟ್ಟಿದೆ, ಆದರೆ ರಾಯಚೂರು ಮತ್ತು ಇತರೆ ಜಿಲ್ಲೆಗಳಲ್ಲಿನ ಸಾವುಗಳಿಗೆ ಏನು ಕಾರಣ? ಈ ವಿಚಾರಗಳನ್ನು ಮುಚ್ಚಿಟ್ಟು, ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಲಾಗುತ್ತಿದೆ. ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ, ಕಳಪೆ ಔಷಧ ಉತ್ಪಾಧಿಸುವ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ, ಕಂಪನಿಯು ಸ್ಥಾಪನೆಗೊಂಡಿರುವ ರಾಜ್ಯಕ್ಕೆ ಇರುತ್ತದೆ ಎಂದು ಆರೋಗ್ಯ ಸಚಿವರು ಹೇಳುತ್ತಿದ್ದಾರೆ, ಇದು ನಿಜ, ಆದರೆ, ಕಳಪೆ ಔಷಧ ಎಂದು ತಿಳಿದೂ ಕೂಡ ಅದನ್ನು ಖರೀದಸಬೇಕೆಂದು ಎಲ್ಲೂ ಕಾನೂನಿಲ್ಲ. ರಾಜ್ಯ ಸರ್ಕಾರದ ಒಡೆತನದ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮವು ಭ್ರಷ್ಟಾಚಾರದ ಕೂಪವಾಗಿದ್ದು, ಕಳಪೆ ಔಷಧಿಗಳನ್ನು ಖರೀದಿಸಿ ಆಸ್ಪತ್ರೆಗಳಿಗೆ ಸರಬರಾಜು ಮಾಡುತ್ತಿದೆ. ಈ ವಿಚಾರ ತಿಳಿದೂ ಇಲ್ಲಿಯವರೆಗೆ ಕಳಪೆ ಔಷಧ ಖರೀದಿ ಮಾಡಿದವರ ಒಬ್ಬರ ಮೇಲೂ ಕ್ರಮ ವಹಿಸದೆ, ಸಂಬಂಧವಿಲ್ಲದ ಔಷಧ ನಿಯಂತ್ರಕರನ್ನು ಅಮಾನತು ಮಾಡಿ ಕಣ್ಣೊರೆಸುವ ಕೆಲಸ ಮಾಡಲಾಗಿದೆ. ಕಳಪೆ ಔಷಧ ಎಂದು ತಿಳಿದೂ ಬಂದರೆ, ಖರೀದಿದಾರನಾದ ಸರ್ಕಾರವು ಅದನ್ನು ಖರೀದಿ ಮಾಡದಿರುವ ಎಲ್ಲಾ ಹಕ್ಕು ಹೊಂದಿದೆ, ಆದರೆ ನಿರಂತರವಾಗಿ ಕಳಪೆ ಔಷಧಿಗಳನ್ನು ಖರೀದಿ ಮಾಡಿ ಸರ್ಕಾರಿ ಪ್ರಾಯೋಜಿತ ಕೊಲೆಗಳಿಗೆ ಕಾರಣವಾಗಿ, ಆಸ್ಪತ್ರೆಗಳು ಇಂದು ಸಾವಿನ ಮನೆಗಳಾಗಿವೆ. ಯಾವ ಔಷಧಿಯನ್ನು ಖರೀದಿ ಮಾಡಬೇಕು ಮತ್ತು ಯಾವುದನ್ನು ತಿರಸ್ಕರಿಸಬೇಕು ಎಂದು ನಿರ್ಧರಿಸುವ ಹಕ್ಕು ಸರ್ಕಾರಕ್ಕೆ ಇರುತ್ತದೆ ಮತ್ತು ಅದಕ್ಕೆ ತಕ್ಕನಾಗಿ ಟೆಂಡರ್ ನಿಯಮಗಳನ್ನು ರೂಪಿಸಬೇಕೆ ಹೊರತು, ಮತ್ತೊಬ್ಬರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಬಾರದು.
ಬಳ್ಳಾರಿ ಪ್ರಕರಣದ ನಂತರ ರಾಜ್ಯದಲ್ಲಿ ಗುಣಮಟ್ಟದ ಔಷಧಿ ಖರೀದಿಗಾಗಿ ತಮಿಳುನಾಡು ಮಾದರಿಯನ್ನು ಅವಳವಡಿಸಿಕೊಳ್ಳುವುದಾಗಿ ಮುಖ್ಯಮಂತ್ರಿ ಹಾಗು ಆರೋಗ್ಯ ಸಚಿವರು ತಿಳಿಸಿದ್ದರು, ಆದರೆ ಈಗ ಆ ಬಗ್ಗೆ ಚಕಾರವಿಲ್ಲ, ಯಾಕೆಂದರೆ, ಅವರಿಗೆ ಪ್ರಸ್ತುತ ಅವ್ಯವಸ್ಥೆ ಮತ್ತು ಅಕ್ರಮಗಳು ಮುಂದುವರೆಯಬೇಕು, ಇದರಿಂದ ತಮಗೆ ಕಮೀಷನ್ ದಂಧೆ ಮುಂದುವರೆಯಬೇಕು ಎಂಬುದಾಗಿದೆ. ಇದಕ್ಕಾಗಿ ಈಗ ಮತ್ತೊಬ್ಬರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಲಾಗುತ್ತಿದೆ. ಸರ್ಕಾರಕ್ಕೆ ಜನರ ಆರೋಗ್ಯದ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದಿದ್ದರೆ, ಸಚಿವರು ತಮ್ಮ ಲೇಖನದಲ್ಲಿ ಕಳಪೆ ಔಷಧಿಗಳನ್ನು ಉತ್ಪಾಧಿಸುವ ಕಂಪನಿಗಳನ್ನು ಜಾಲತಾಣಗಳಲ್ಲಿ ಪ್ರಕಟಿಸಬೇಕೆಂದು ತಿಳಿಸಿದ್ದಾರೆ. ಇಂತಹ ಕೆಲಸವನ್ನು ತಮಿಳುನಾಡು, ಕೇರಳ ಮತ್ತು ರಾಜಸ್ಥಾನ ಸರ್ಕಾರಗಳು ತಮ್ಮ ಹಂತದಲ್ಲಿಯೆ ಮಾಡುತ್ತಿವೆ, ಆದರೆ ಕರ್ನಾಟಕ ಸರ್ಕಾರ ಮಾತ್ರ ಬಹುತೇಕ ವಿಚಾರಗಳನ್ನು ಮರೆಮಾಚುವ ಕೆಲಸ ಮಾಡುತ್ತಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೇಳಿದರೂ ಕೂಡ ಮಾಹಿತಿ ನಿರಾಕರಿಸುವ ಅಥವಾ ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಸಚಿವರು ತಿಳಿಸಿರುವಂತೆ 894 ಔಷಧ ಮಾದರಿಗಳಲ್ಲಿ 601 ಮಾದರಿಗಳು ಕಳಪೆಯಾಗಿವೆ, ಅವರು ಕೇಂದ್ರ ಸರ್ಕಾರಕ್ಕೆ ಮಾಡಿರುವ ಮನವಿಯಲ್ಲಿ, ಈ ಮಾಹಿತಿಯನ್ನು ಜಾಲತಾಣಗಳಲ್ಲಿ ಪ್ರಕಟಿಸುವುದು ಒಂದಾಗಿದೆ. ಈ ಕೆಲಸವನ್ನು ತಮ್ಮ ಇಲಾಖೆಯ ಮೂಲಕವೇ ಯಾವುದೇ ವೆಚ್ಚವಿಲ್ಲದೆ ಮಾಡಬಹುದು, ಅದಕ್ಕೆ ಮತ್ತೊಬ್ಬರನ್ನು ಅವಲಂಬಿಸುವ ಅವಶ್ಯಕತೆ ಇಲ್ಲ. ಕಳಪೆ ಗುಣಮಟ್ಟದ ಔಷಧಿ ಎಂದು ಗುರುತಿಸಲ್ಪಟ್ಟ 601 ಮಾದರಿಗಳ ಫಲಿತಾಂಶವನ್ನು, ಆರೋಗ್ಯ ಇಲಾಖೆ ರಾಜ್ಯದ ಜನರಿಗೆ ತಿಳಿಸುವ ಕೆಲಸ ಮಾಡಿದೆಯೆ? ಯಾವ ಜಾಲತಾಣದಲ್ಲಿ ಪ್ರಕಟಿಸಿದೆ ಎಂದು ಆರೋಗ್ಯ ಸಚಿವರು ತಿಳಿಸಬೇಕು. ಅವರು ತಮ್ಮ ಇಲಾಖೆಗೆ ಸಂಭಂಧಿಸಿದ ಜಾಲತಾಣಗಳನ್ನು ಗಮನಿಸಿದರೆ, ತಮ್ಮ ಇಲಾಖೆಯು ತಲುಪಿರುವ ದುಸ್ಥಿತಿ ಮತ್ತು ಎಷ್ಟ ಕಲುಷಿತಗೊಂಡಿದೆ ಎಂದು ತಿಳಿಯುತ್ತದೆ. ಆರೋಗ್ಯ ಇಲಾಖೆಯ ವೆಬ್‍ಸೈಟ್ 2019 ರಲ್ಲಿ ಸ್ಥಗಿತಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭಾವಚಿತ್ರ ಬದಲಾಗಿರುವುದನ್ನು ಬಿಟ್ಟು ಅಲ್ಲಿ ಮತ್ತಿನ್ನೇನು ಬದಲಾಗಿಲ್ಲ. ಇನ್ನು ಔಷಧ ನಿಯಂತ್ರಣ ಇಲಾಖೆಯ ಜಾಲತಾಣದಲ್ಲಿನ ಮಾಹಿತಿ, ಅಂಕಿ-ಅಂಶಗಳು 2017 ಕ್ಕೆ ಸ್ಥಗಿತಗೊಂಡಿದೆ ಮತ್ತು ಅದರಲ್ಲಿನ ಬಹುತೇಕ ಕೊಂಡಿಗಳು (ಲಿಂಕ್) ಕೆಲಸ ಮಾಡುತ್ತಿಲ್ಲ. ಕಳಪೆಯಾಗಿ ನಿರ್ವಹಣೆಯಾಗಿರುವ ಜಾಲತಾಣಕ್ಕೆ ಏನಾದರು ಬಹುಮಾನವಿದ್ದರೆ, ಅದರಲ್ಲಿ ಆರೋಗ್ಯ ಇಲಾಖೆಗೆ ಪ್ರಥಮ ಬಹುಮಾನ ಖಚಿತ. ಕಳಪೆ ಔಷಧಿಗಳನ್ನು ಖರೀದಿಸುವ ಮತ್ತು ಕಳಪೆಯಾಗಿ ಆಸ್ಪತ್ರೆಗಳನ್ನು ನಿರ್ವಹಣೆ ಮಾಡುತ್ತಿರುವುದನ್ನು ಗಮನಿಸಿದರೆ, ಅದಕ್ಕೆ ಕಾರಣ ಭ್ರಷ್ಟಾಚಾರ ಮತ್ತು ಅವ್ಯವಹಾರ ಬಿಟ್ಟು ಮತ್ತಿನ್ನೇನಿಲ್ಲ. ಇನ್ನು ರಾಜ್ಯ ಔಷಧ ನಿಯಂತ್ರಣ ಇಲಾಖೆಯಲ್ಲಿನ ಔಷಧ ನಿರೀಕ್ಷಕರ (ಡ್ರಗ್ ಇನ್ಸ್ಪೆಕ್ಟರ್) ಹುದ್ದೆಗಳು ಖಾಲಿಬಿದ್ದು ವರ್ಷಗಳೇ ತುಂಬಿದರೂ ಕೂಡ ಯಾಕಾಗಿ ಖಾಲಿ ಬಿಡಲಾಗಿದೆ? ಹುದ್ದೆಗಳನ್ನು ಖಾಲಿ ಇಟ್ಟುಕೊಂಡು ಔಷಧಿಗಳನ್ನು ಹೇಗೆ ಪರೀಕ್ಷೆ ಮಾಡಲಾಗುತ್ತದೆ? ಇದಾವುದಕ್ಕೂ ಆರೋಗ್ಯ ಸಚಿವರಲ್ಲಿ ಉತ್ತರವೇ ಇಲ್ಲ.
ರಾಜ್ಯದಲ್ಲಿ ತಕ್ಷಣವೇ ಆಸ್ಪತ್ರೆಗಳಲ್ಲಿ, ಆರೋಗ್ಯ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ಅಕ್ರಮಗಳಿಗೆ ಕಡಿವಾಣ ಹಾಕಬೇಕು, ಇಲಾಖೆಯಲ್ಲಿನ ಅವ್ಯವಹಾರಗಳ ಬಗ್ಗೆ ಹಾಗು ಬಾಣಂತಿಯರ ಸರಣಿ ಸಾವಿನ ಬಗ್ಗೆ ಹಾಲಿ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಬೇಕು, ತಮಿಳುನಾಡು ಮಾದರಿಯಲ್ಲಿ ಔಷಧಿ ಖರೀದಿ ಪ್ರಕ್ರಿಯೆ ಜಾರಿಯಾಗಬೇಕು ಹಾಗು ತಮ್ಮ ಇಲಾಖೆಗಳನ್ನು ನಿರ್ವಹಿಸಲು ಸಂಪೂರ್ಣವಾಗಿ ವಿಫಲರಾಗಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಶರಣ ಪ್ರಕಾಷ್ ಪಾಟೀಲ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಆಗ್ರಹಿಸುತ್ತದೆ.
ಇನ್ನು ಒಕ್ಕೂಟ (ಕೇಂದ್ರ) ಸರ್ಕಾರವು ಕೊಲ್ಕತ್ತದಲ್ಲಿನ ತನ್ನ ಕೇಂದ್ರೀಯ ಔಷಧ ಪರೀಕ್ಷಾ ಕೇಂದ್ರವು ಕಳಪೆ ಗುಣಮಟ್ಟದ ಔಷಧಿಗಳನ್ನು ಉತ್ತಮ ಗುಣಮಟ್ಟ ಹೊಂದಿವೆ ಎಂದು ಸರ್ಟಿಫಿಕೇಟ್ ನೀಡುವುದರ ಹಿಂದಿರುವ ಮರ್ಮವೇನು ಮತ್ತು ಅದನ್ನು ಹೇಗೆ ಸರಿ ಮಾಡಲಾಗುತ್ತದೆ ಎಂದು ವಿವರಿಸಬೇಕು ಮತ್ತು ತಕ್ಷಣ ಕ್ರಮ ಕೈಗೊಳ್ಳಬೇಕು.
ಇದೇ ಸಂದರ್ಭದಲ್ಲಿ ಕೆಆರ್‌ಎಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಬಸವಪ್ರಭು ಮೇದ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್, ನಿರುಪಾದಿ ಕೆ ಗೋಮರ್ಸಿ ಕಾರ್ಯದರ್ಶಿಗಳಾದ ಶ್ರೀಮತಿ ಗಂಗಾ ಕೆ ನಾಯಕ್,ಶಿವರಾಜ್ ವೀರಾಪುರ ,ಕುಮಾರ್ ನಾಯಕ್, ಆಂಜನೇಯ ನಾಯಕ್ ,ಗೋವಿಂದನಾಯಕ್ ಸೇರಿದಂತೆ ಹಲವಾರು ಜನ ಭಾಗವಹಿಸಿದ್ದರು..
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030