ಸಂಡೂರು ವಿಧಾನಸಭೆ ಉಪಚುನಾವಣೆ; ಸುಸೂತ್ರವಾಗಿ ನಡೆದ ಮಸ್ಟರಿಂಗ್ ಕಾರ್ಯ
ಮತದಾನ ಕಾರ್ಯಕ್ಕೆ ತೆರಳಿದ ಅಧಿಕಾರಿ ಹಾಗೂ ಸಿಬ್ಬಂದಿ
ಬಳ್ಳಾರಿ:ಸಂಡೂರು ವಿಧಾನಸಭೆ ಉಪಚುನಾವಣೆಗೆ ನ.13 ಬುಧವಾರ ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಮತದಾನ ಜರುಗಲಿದ್ದು, ಸಂಡೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆಗಳಿಗೆ ಮತದಾನ ಕಾರ್ಯಕ್ಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿಯೋಜನೆ ಮಾಡುವ ಮಸ್ಟರಿಂಗ್ ಕಾರ್ಯ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಜರುಗಿತು.
ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿ, ಸಿಬ್ಬಂದಿಗಳಿಗೆ ಗೊಂದಲಕ್ಕೆ ಆಸ್ಪದವಿಲ್ಲದಂತೆ, ಮಸ್ಟರಿಂಗ್ ಕಾರ್ಯಕ್ಕೆ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಕೈಗೊಳ್ಳಲಾಯಿತು.
ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ರಾಜೇಶ್ ಹೆಚ್.ಡಿ ಅವರು ಮಸ್ಟರಿಂಗ್ ಕಾರ್ಯದ ಉಸ್ತುವಾರಿ ವಹಿಸಿದ್ದರು.
ಚುನಾವಣೆ ಕಾರ್ಯ ಹಾಗೂ ಮತಗಟ್ಟೆಯ ಬಂದೋಬಸ್ತ್ ಗಾಗಿ ನಿಯೋಜಿತಗೊಂಡಿರುವ ಪೋಲಿಸರು, ಗೃಹರಕ್ಷಕ ದಳದವರು ಆಗಮಿಸಿದ್ದರು.
ಮತದಾನ ಪ್ರಕ್ರಿಯೆಗೆ ತೆರಳುವ ಅಧಿಕಾರಿ, ಸಿಬ್ಬಂದಿ ಹಾಗೂ ಪೊಲೀಸರನ್ನು ಆಯಾ ಗ್ರಾಮಗಳಲ್ಲಿನ ಮತಗಟ್ಟೆಗಳತ್ತ ತೆರಳುವಂತಹ ಮಾರ್ಗಗಳನ್ನು ಗುರುತಿಸಿ ಕರೆದುಕೊಂಡು ಹೋಗಲು ಬಸ್, ಕ್ರೂಸರ್ ಹಾಗೂ ಜೀಪ್‌ಗಳು ಕಾಲೇಜು ಮುಂಭಾಗದಲ್ಲಿ ಸಾಲಾಗಿ ಜಮಾವಣೆಗೊಂಡಿದ್ದವು.
ಕಾಲೇಜು ಆವರಣದಲ್ಲಿ ಅಧಿಕಾರಿ, ಸಿಬ್ಬಂದಿಗಳಿಗೆ ತಾವು ತೆರಳಬೇಕಿರುವ ಮತಗಟ್ಟೆಯ ವಿವರ ಹಾಗೂ ಬಸ್‌ಗಳ ವಿವರವನ್ನು ಧ್ವನಿವರ್ಧಕ ಮೂಲಕ ತಿಳಿಸುವ ವ್ಯವಸ್ಥೆ ಮಾಡಲಾಗಿತ್ತು.
ಮಸ್ಟರಿಂಗ್ ಕಾರ್ಯಕ್ಕೆ ಆಗಮಿಸಿದ ಅಧಿಕಾರಿ, ಸಿಬ್ಬಂದಿಗಳ ಆರೋಗ್ಯದಲ್ಲಿ ವ್ಯತ್ಯಯ ಉಂಟಾದಲ್ಲಿ, ತ್ವರಿತ ಸ್ಪಂದನೆಗಾಗಿ, ವೈದ್ಯರಿಂದ ಆರೋಗ್ಯ ತಪಾಸಣೆ, ಅಗತ್ಯ ಔಷಧಿಗಳು, ಓಆರ್‌ಎಸ್, ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು.
ಚುನಾವಣಾ ಸಾಮಗ್ರಿ ವಿತರಣೆ, ಮತಯಂತ್ರಗಳ ವಿತರಣೆ, ಚುನಾವಣೆಗೆ ಮತಗಟ್ಟೆಗಳಿಗೆ ನಿಯೋಜನೆ, ಚುನಾವಣಾ ಕರ್ತವ್ಯಕ್ಕೆ ತೆರಳಲು ಆಗಮಿಸಿದ್ದ ಅಧಿಕಾರಿ, ಸಿಬ್ಬಂದಿಗಳಿಗೆ ಕಾಲೇಜು ಆವರಣದಲ್ಲಿ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಹಾಗೂ ಮತಗಟ್ಟೆಗಳತ್ತ ತೆರಳುವ ಮುನ್ನ ಮಧ್ಯಾಹ್ನದ ಊಟ ಪೂರೈಸಿಕೊಂಡು ಹೋಗುವ ರೀತಿ ವ್ಯವಸ್ಥೆ ಮಾಡಲಾಗಿತ್ತು.
ಜಿಲ್ಲಾಧಿಕಾರಿ ಭೇಟಿ ಪರಿಶೀಲನೆ:
ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಯಾರೂ ಭಯಭೀತರಾಗದೇ ಚುನಾವಣಾ ಕಾರ್ಯ ಶಾಂತಿಯುತವಾಗಿ ಕೈಗೊಳ್ಳಬೇಕು. ಯಾವುದೇ ರೀತಿಯ ಗೊಂದಲ ಕಂಡುಬoದಲ್ಲಿ ಸಂಬoಧಿಸಿದ ಪಿಆರ್‌ಓಗಳ ಗಮನಕ್ಕೆ ತರಬೇಕು ಎಂದರು.
ಚುನಾವಣೆ ಆಯೋಗ ಕೈಪಿಡಿಯಲ್ಲಿನ ಚೆಕ್‌ಲಿಸ್ಟ್ ನಂತೆಯೇ ಮತಗಟ್ಟೆಗಳಿಗೆ ತೆರಳುವ ಅಧಿಕಾರಿ ಹಾಗೂ ಸಿಬ್ಬಂದಿಗೆ ವಿದ್ಯುನ್ಮಾನ ಮತಯಂತ್ರ, ಮತದಾರ ಪಟ್ಟಿ, ಸ್ಪರ್ಧಿಸುತ್ತಿರುವ ಉಮೇದುವಾರರ ಪಟ್ಟಿ, ಶಾಹಿ ಸೇರಿದಂತೆ ಇತರೆ ಸ್ಟೇಷನರಿ ಕಿಟ್‌ಗಳನ್ನು ಚೆಕ್ ಲಿಸ್ಟ್ ನ ಕ್ರಮದಲ್ಲಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ.ವಿ.ಜೆ., ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಚುನಾವಣಾಧಿಕಾರಿ ರಾಜೇಶ್.ಹೆಚ್.ಡಿ ಸೇರಿದಂತೆ ಇತರರು ಇದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030