ವಿಶ್ವ ಮಾನವ ಹಕ್ಕುಗಳ ದಿನಾಚರಣೆ ತಪ್ಪಿತಸ್ಥನನ್ನೂ ಮಾನವೀಯ ದೃಷ್ಟಿಯಿಂದ ನೋಡುವ ವ್ಯವಸ್ಥೆ ನಮ್ಮ ದೇಶದಲ್ಲಿದೆ : ನ್ಯಾ.ಮಂಜುನಾಥ ನಾಯಕ್…!!!

Listen to this article

ವಿಶ್ವ ಮಾನವ ಹಕ್ಕುಗಳ ದಿನಾಚರಣೆ
ತಪ್ಪಿತಸ್ಥನನ್ನೂ ಮಾನವೀಯ ದೃಷ್ಟಿಯಿಂದ ನೋಡುವ ವ್ಯವಸ್ಥೆ ನಮ್ಮ ದೇಶದಲ್ಲಿದೆ : ನ್ಯಾ.ಮಂಜುನಾಥ ನಾಯಕ್
ಶಿವಮೊಗ್ಗ,:ಓರ್ವ ವ್ಯಕ್ತಿ ಅಪರಾಧ ಕೃತ್ಯವೆಸಗಿ, ತಪ್ಪಿತಸ್ಥ ಎಂದು ಸಾಬೀತಾಗಿ ಜೈಲು ಸೇರಿದ ನಂತರವೂ ಆತನನ್ನು ಮಾನವೀಯ ದೃಷ್ಟಿಯಿಂದ ನೋಡಿಕೊಳ್ಳುವ ವ್ಯವಸ್ಥೆ ನಮ್ಮ ದೇಶದಲ್ಲಿದ್ದು, ಇದು ಮಾನವ ಹಕ್ಕುಗಳ ಮೌಲ್ಯದ ಒಂದು ಉದಾಹರಣೆಯಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಂಜುನಾಥ ನಾಯಕ್ ತಿಳಿಸಿದರು.
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸ್ಥಳೀಯ ಸರ್ಕಾರೇತರ ಸಂಸ್ಥೆಗಳಾದ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸಮಿತಿ ಹಾಗೂ ಇತರೆ ಸಂಸ್ಥೆಗಳ ಸಹಯೋಗದಲ್ಲಿ ಮಂಗಳವಾರ ಜಿ.ಪಂ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವ ಸಂಸ್ಥೆ 1948 ಡಿ.10 ರಂದು ಮಾನವ ಹಕ್ಕುಗಳನ್ನು ಸಾರ್ವತ್ರಿವಕಾಗಿ ಘೋಷಣೆ ಮಾಡಿದ ದಿನ. ಈ ದಿನವನ್ನು ಮಾನವ ಹಕ್ಕುಗಳ ದಿನಾಚರಣೆಯನ್ನಾಗಿ ಆಚರಿಸುವ ಮೂಲಕ ಅರಿವು ಮೂಡಿಸಲಾಗುತ್ತಿದೆ.
2011 ರ ನವೆಂಬರ್ ನ.26 ರಂದು ಓರ್ವ ಉಗ್ರ ಮುಂಬೈ ಮೇಲೆ ದಾಳಿ ನಡೆಸಿ ಸಾವು, ನೋವಿಗೆ ಕಾರಣರಾಗಿದ್ದರೂ, ಆತನಿಗೆ ಒಬ್ಬ ವಕೀಲರನ್ನು ನೇಮಿಸಿ, ಕಾನೂನು ಪ್ರಕ್ರಿಯೆಗೆ ಒಳಪಡಿಸಿ ತಪ್ಪಿತಸ್ಥ ಎಂದು ಘೋಷಣೆಯಾದ ಮೇಲೂ ಜೈಲಿನಲ್ಲಿಯೂ ಮಾನವೀಯತೆಯಿಂದ ನೋಡಿಕೊಳ್ಳಲಾಯಿತು. ಇದು ಮಾನವ ಹಕ್ಕುಗಳ ಮೌಲ್ಯಕ್ಕಿರುವ ಒಂದು ಉದಾಹರಣೆ. ಇದು ನಮ್ಮ ದೇಶದಲ್ಲಿರುವ ಮಾನವ ಹಕ್ಕುಗಳಿಗಿರುವ ಪ್ರಾಮುಖ್ಯತೆ ತೋರುತ್ತದೆ.
ನ್ಯಾಯಾಲಯದಲ್ಲಿ ಪ್ರತಿ ಸಂದರ್ಭದಲ್ಲಿ ಮಾನವ ಹಕ್ಕುಗಳ ರಕ್ಷಣೆಗೆ ಪ್ರಯತ್ನ ನಡೆಯುತ್ತಲೇ ಇರುತ್ತದೆ ಮತ್ತು ಸಫಲ ಕೂಡ ಆಗಿದೆ. ಹಾಗೂ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಶೋಷಿತ ವರ್ಗದವರಿಗೆ, ಜೈಲಿನ ಖೈದಿಗಳ ರಕ್ಷಣೆಗೆ ಉಚಿತವಾಗಿ ಕಾನೂನಿನ ನೆರವು ನೀಡುತ್ತದೆ. ಮಾನವ ಹಕ್ಕುಗಳ ರಕ್ಷಣೆಯಲ್ಲಿ ಸರ್ಕಾರದಂತೆಯೇ ಎನ್‌ಜಿಒ ಪಾತ್ರವೂ ಬಹಳ ದೊಡ್ಡದಿದೆ. ಮಾನವ ಹಕ್ಕುಗಳ ಸಮಿತಿಗಳೂ ಕಾರ್ಯ ನಿರ್ವಹಿಸುತ್ತಿದ್ದು ಸಮಾಜದ ಕಟ್ಟಕಡೆಯ ವ್ಯಕ್ತಿಯ ಹಕ್ಕುಗಳ ಉಲ್ಲಂಘನೆ ನಿಮ್ಮ ಗಮನಕ್ಕೆ ಬರುತ್ತದೆ ಆದ್ದರಿಂದ ನೀವು ಮಾನವ ಹಕ್ಕುಗಳ ರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕಿದೆ. ಮಾನವ ಹಕ್ಕುಗಳ ರಕ್ಷಣೆಗೆ ಸಾಕಷ್ಟು ಕಾನೂನುಗಳಿದ್ದು ಅದನ್ನು ಜಾರಿಗೊಳಿಸುವ ಇಚ್ಚಾಶಕ್ತಿ ಎಲ್ಲರಲ್ಲಿ ಇರಬೇಕೆಂದರು.


ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೊಷ್ ಎಂ ಎಸ್ ಮಾತನಾಡಿ, ನಮ್ಮ ದೇಶದಲ್ಲಿ ಅತ್ಯಂತ ಕ್ರೂರ ಕೃತ್ಯ ಮಾಡಿದವರು, ತಪ್ಪಿತಸ್ಥರ ಹಕ್ಕನ್ನೂ ರಕ್ಷಿಸುವ ವ್ಯವಸ್ಥೆ ಇದ್ದು, ಇದು ಮಾನವ ಹಕ್ಕುಳಗ ರಕ್ಷಣೆಗೆ ಒಂದು ಉದಾಹರಣೆಯಾಗಿದೆ.
ಬಹುತೇಕ ಪ್ರಕರಣಗಳಲ್ಲಿ ಪಕ್ಷಗಾರರು ಮಾತು ಬಿಟ್ಟು ಹಗೆ, ದ್ವೇಷ ಸಾಧಿಸುತ್ತಾರೆ.
ಆಗ ಸಿವಿಲ್ ಪ್ರಕರಣಗಳು ಕ್ರಿಮಿನಲ್ ಪ್ರಕರಣಗಳಾಗುತ್ತವೆ. ದ್ವೇಷ ಮುಂದುವರೆಸುತ್ತಾ ಪ್ರಕರಣಗಳು 20 ರಿಂದ 25 ವರ್ಷಗಳವರೆಗೆ ಮುಂದುವರೆಯುತ್ತಲೇ ಇರುತ್ತವೆ. ಆಮೇಲೆ ಅವರ ಮಕ್ಕಳು ರಾಜೀ ಸಂಧಾನಕ್ಕೆ ಬರುತ್ತಾರೆ. ಆದ್ದರಿಂದ ಯಾವುದೇ ಸಿವಿಲ್ ಪ್ರಕರಣವನ್ನು ಯಾರೇ ದಾಖಲಿಸಿದರೂ ಸಹ ಪಕ್ಷಗಾರರು ಮಾತಾಡಿಕೊಳ್ಳಬೇಕು. ಮಧ್ಯಸ್ಥಿಕೆ ಕೇಂದ್ರಕ್ಕೆ ಭೇಟಿ ಮಾಡಿ ಪರಿಹಾರ ಕಂಡುಕೊಳ್ಳಬಹುದು. ರಾಜೀ ಸಂಧಾನ ಮಾಡಿಕೊಳ್ಳುವ ಮೂಲಕ ಅವರ ಮಕ್ಕಳಿಗೆ ಅಭಿರಕ್ಷೆ ನೀಡಬೇಕು. ದ್ವೇಷ ಸಾಧನೆ ಮಾಡಿದರೆ ಇತರರ ಹಕ್ಕನ್ನು ಉಲ್ಲಂಘನೆ ಮಾಡಿದಂತೆ ಆಗುತ್ತದೆ ಎಂದ ಅವರು ಮಾನವ ಹಕ್ಕು ಕಾಯ್ದೆಯಡಿ ವಿವಿಧ ಪ್ರಕರಣಗಳಲ್ಲಿ ನೊಂದ ವ್ಯಕ್ತಿಗಳಿಗೆ ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅನಿಲ್ ಕುಮಾರ್ ಭೂಮರಡ್ಡಿ, ನಾವು ಇಂಗ್ಲೆoಡಿನ ಮ್ಯಾಗ್ನಾ ಕಾರ್ಟಾದ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತೇವೆ. ಆದರೆ 12 ನೇ ಶತಮಾನದಲ್ಲೇ ನಮ್ಮ ರಾಜ್ಯದಲ್ಲಿ ಬಸವಾದಿ ಶರಣರು ತಮ್ಮ ವಚನಗಳ ಮೂಲಕ ಸಮಾನತೆಯ ಬಗ್ಗೆ, ಮಾನವ ಹಕ್ಕುಗಳ ಬಗ್ಗೆ ವ್ಯಾಪಕ ಪ್ರಚಾರ ಮಾಡಿ ವಿಶ್ವಕ್ಕೇ ತೋರಿಸಿದ್ದಾರೆ. ಭವ್ಯ ಪರಂಪರೆ, ಇತಿಹಾಸ ಹೊಂದಿರುವ ನಾವು ಇದನ್ನು ಪರಿಪಾಲಿಸುವ ಮೂಲಕ ಎಲ್ಲರಿಗೂ ಮಾದರಿಯಾಗಬೇಕು.ರಾಷ್ಟಕವಿ ಕುವೆಂಪು ಅವರು ತಮ್ಮ ವಿಶ್ವ ಮಾನವ ಸಂದೇಶದಲ್ಲಿ ಇದನ್ನೇ ಹೇಳಿದ್ದಾರೆ. ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ನಮ್ಮೆಲ್ಲರ ಮೇಲೆ ಮಾನವ ಹಕ್ಕುಗಳನ್ನು ಸಂರಕ್ಷಿಸುವ ಗುರುತರ ಜವಾಬ್ದಾರಿ ಇದೆ. ಆಗಾಗ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುತ್ತದೆ. ಇದು ಆಗದಂತೆ ಅತ್ಯಂತ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಮಾನವ ಹಕ್ಕುಗಳ ಉಲ್ಲಂಘನೆಯಾದಾಗ, ತಪ್ಪುಗಳು ನಡೆದಾಗ ಪ್ರತಿಭಟಿಸುವ, ಖಂಡಿಸಬೇಕು. ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಎಲ್ಲರೂ ಮುಂದೆ ಬರಬೇಕು ಎಂದರು.

ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಜಿ.ಆರ್.ರಾಘವೇಂದ್ರ ಸ್ವಾಮಿ ಮಾತನಾಡಿ, ಯಾರದೇ ಹಕ್ಕಿಗೆ ಚ್ಯುತಿ ಬರಬಾರದೆಂಬ ಉದ್ದೇಶದಿಂದ ಮಾನವ ಹಕ್ಕುಗಳ ಅಂಗೀಕಾರವಾಗಿದೆ. ಯಾವುದೇ ವ್ಯಕ್ತಿ ಆರ್ಥಿಕ ಸಬಲತೆ ಇಲ್ಲದಾಗ ನ್ಯಾಯಾಂಗ ಇಲಾಖೆಯಿಂದಲೇ ಉಚಿತವಾಗಿ ವಕೀಲರನ್ನು ನೇಮಿಸುವ ವ್ಯವಸ್ಥೆಯನ್ನು ಕಾನೂನು ಸೇವೆಗಳ ಪ್ರಾಧಿಕಾರ ಮಾಡುತ್ತದೆ. ಹಿರಿಯ ಸಿವಿಲ್ ನ್ಯಾಯಾಧೀಶರರನ್ನು ಪ್ರಾಧಿಕಾರಕ್ಕೆ ನೇಮಿಸಿ ಅವರ ಮೂಲಕ ಉಚಿತ ಕಾನೂನು ಅರಿವು ನೆರವನ್ನು ನಿಡುವ ವ್ಯವಸ್ಥೆಯನ್ನು ಸರ್ಕಾರ ಮಾಡಿದೆ. ಇದರ ಮುಖ್ಯ ಉದ್ದೇಶ ಮಾನವ ಹಕ್ಕುಗಳನ್ನು ಕಾಪಾಡುವುದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಮಾತನಾಡಿ, ಕಾನೂನಾತ್ಮಕ, ಸಂವಿಧಾನಾತ್ಮಕ ಮತ್ತು ಮಾನವ ಹಕ್ಕುಗಳು ಈ ಮೂರು ರೀತಿಯ ಹಕ್ಕುಗಳನ್ನು ನಾವು ಹೊಂದಿದ್ದೇವೆ. ಹಾಗೂ ನಮ್ಮ ಸಂವಿಧಾನ ಆರು ರೀತಿಯ ಮೂಲಭೂತ ಹಕ್ಕುಗಳನ್ನು ನೀಡಿದೆ. ಇಡೀ ವಿಶ್ವಕ್ಕೇ ಅನ್ವಯವಾಗುವುದು ಮಾನವ ಹಕ್ಕುಗಳು. ಇದು ಹುಟ್ಟಿನಿಂದ ಬಂದದ್ದು. ವಿಶ್ವ ಸಂಸ್ಥೆ ಇವುಗಳನ್ನು ಗುರುತಿಸಿ ಅಂಗೀಕರಿಸಿದೆ.
ಸಮಾನತೆ ಹಕ್ಕು, ಶಿಕ್ಷಣ ಹಕ್ಕು, ಧಾರ್ಮಿಕ ಹಕ್ಕು ಈ ಎಲ್ಲ ಹಕ್ಕುಗಳ ಕುರಿತು 12 ನೇ ಶತಮಾನದಲ್ಲಿ ವಚನಕಾರರು ಪ್ರತಿಪಾದಿಸಿ, ಸಮಾಜಕ್ಕೆ ನೆಲೆಗೊಳ್ಳುವಂತೆ ಮಾಡಿದ್ದರು. ಇದೇ ಹಕ್ಕುಗಳನ್ನು ಡಾ. ಬಿ.ಆರ್ ಅಂಬೇಡ್ಕರ್‌ರವರು ಹೇಳಿದಂತೆ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ಕಾಪಾಡಿಕೊಳ್ಳೋಣ ಎಂದರು.
ಕರ್ನಾಟಕ ಮಾನವ ಹಕ್ಕುಗಳ ಸಮಿತಿಯ ರಾಜ್ಯ ಉಪಾಧ್ಯಕ್ಷ ಪ್ರದೀಪ್ ಮೀತಲ್ ಮಾತನಾಡಿ, 2016 ರಲ್ಲಿ ಮಾನವ ಹಕ್ಕುಗಳ ಸಮಿತಿ ರಚನೆಯಾಗಿದ್ದು, ಅಂದಿನಿoದ ಮಾನವ ಹಕ್ಕುಗಳ ಕುರಿತು ಅನೇಕ ಅರಿವು ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಎಲ್ಲರೂ ಮಾನವ ಹಕ್ಕುಗಳ ಬಗ್ಗೆ ತಿಳಿದುಕೊಂಡು, ಎಲ್ಲರೂ ಮತ್ತೊಬ್ಬರ ಹಕ್ಕುಗಳನ್ನು ರಕ್ಷಿಸಬೇಕಿದೆ. ಉಲ್ಲಂಘನೆಯಾದಾಗ ನ್ಯಾಯಾಂಗ ವ್ಯವಸ್ಥೆ ಮೂಲಕ ನ್ಯಾಯ ಒದಗಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಕರ್ನಾಟಕ ಮಾನವ ಹಕ್ಕುಗಳ ಸಮಿತಿ ರಾಜ್ಯ ಸಹ ಕಾರ್ಯದರ್ಶಿ ಎಂ.ಎ.ಗೋಪಿ, ಕರ್ನಾಟಕ ಮಾನವ ಹಕ್ಕುಗಳ ಸಮಿತಿ ರಾಜ್ಯ ಸಹ ಕಾರ್ಯದರ್ಶಿ ಮಹೇಶ್ ಎನ್, ಎ ಆರ್ ರವಿಕುಮಾರ್ ಪಾಲ್ಗೊಂಡಿದ್ದರು…

ವರದಿ, ಸೋಮಶೇಖರ್ ಶಿವಮೊಗ್ಗ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend