ಕ್ಷೇತ್ರೋತ್ಸವದಲ್ಲಿ ಸಮಗ್ರ ನಿರ್ವಹಣೆ ಬಗ್ಗೆ ಮಾಹಿತಿ : ಡಾ.ಜಗದೀಶ್
ಪದ್ಧತಿ ಪ್ರಾತ್ಯಕ್ಷಿಕೆಗಳನ್ನು ರೈತರ ತಾಕುಗಳಲ್ಲಿ ತೆಗೆದುಕೊಂಡು, ಬೀಜೋಪಚಾರ, ಸಮಗ್ರ ಪೋಷಕಾಂಶಗಳ ನಿರ್ವಹಣೆ, ರೋಗ ಮತ್ತು ಕೀಟಗಳಿಗೆ ಸಮಗ್ರ ನಿರ್ವಹಣೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ರೈತರಿಗೆ ತಿಳಿಸಿಕೊಡುತ್ತಿದ್ದಾರೆ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಆರ್.ಸಿ. ಜಗದೀಶ್ ಹೇಳಿದರು.
ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗದ ವತಿಯಿಂದ ಮಾರುತಿನಗರ, ಭದ್ರಾವತಿಯಲ್ಲಿ ಮುಂಚೂಣಿ ಪ್ರಾತ್ಯಕ್ಷಿಕೆ “ಭತ್ತದಲ್ಲಿ ‘ಸಹ್ಯಾದ್ರಿ ಕೆಂಪು ಮುಕ್ತಿ’ ಮತ್ತು ‘ಗಂಧಸಾಲೆ’ ತಳಿಗಳು ಮತ್ತು ಭತ್ತದಲ್ಲಿ “ಪೋಷಕಾಂಶಗಳ ನಿರ್ವಹಣೆ” ಕುರಿತು ಆಯೋಜಿಸಲಾಗಿದ ್ದಕ್ಷೇತ್ರೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭತ್ತದ ತಳಿ ‘ಸಹ್ಯಾದ್ರಿ ಕೆಂಪು ಮುಕ್ತಿ’ಯು ನಮ್ಮ ವಿಶ್ವವಿದ್ಯಾಲಯದಿಂದ ಬಿಡುಗಡೆಗೊಂಡಿರುವುದು ನಮ್ಮ ಹೆಮ್ಮೆ. ‘ಸಹ್ಯಾದ್ರಿ ಕೆಂಪು ಮುಕ್ತಿ’ಯು ಬಣ್ಣದಲ್ಲಿ ಕೆಂಪಾಗಿದ್ದು ಹೆಚ್ಚು ಪೋಷಕಾಂಶಗಳನ್ನು ಹೊಂದಿದ್ದು ರುಚಿಯಾಗಿರುತ್ತದೆ ಎಂದರು. ಇದೇ ರೀತಿ ‘ಗಂಧಸಾಲೆ’ ಭತ್ತದ ತಳಿಯು ಹೆಚ್ಚು ಪರಿಮಳವನ್ನು ಹೊಂದಿದ್ದು ಜೀರಿಗೆ ಹಾಗೆ ಇರುತ್ತದೆ ಎಂದು ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಸಿ. ಸುನಿಲ್ ಇವರು ಮಾತನಾಡುತ್ತಾ, ಸಹ್ಯಾದ್ರಿ ಕೆಂಪು ಮುಕ್ತಿಯು ಹೆಚ್ಚಿನ ಇಳುವರಿ ಕೊಡುವ, ಕಡಿಮೆ ಅವಧಿಯ, ಕೆಂಪು ಅಕ್ಕಿ ಮತ್ತು ಬೆಂಕಿ ರೋಗ ಮತ್ತು ಊದುಬತ್ತಿ ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಅದರಂತೆ, ‘ಗಂಧಸಾಲೆ’ ಭತ್ತದ ತಳಿಯು ಸಣ್ಣ ಸುವಾಸನೆ ಭರಿತ ಅಕ್ಕಿಯಾಗಿದ್ದು, ಹೆಚ್ಚಿನ ಗುಣಮಟ್ಟದ ಮೇವಿನ ಇಳುವರಿಯನ್ನೂ ಸಹ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಪ್ರಗತಿಪರ ರೈತರುಗಳಾದ ಸುಂದರ್ ರಾಜ್, ಮಾರುತಿನಗರ, ಭದ್ರಾವತಿ ಮತ್ತು ಶ್ರೀ ರವಿಕುಮಾರ್ ಬಿ. ವೈ. ದೇವರಹೊಸಹಳ್ಳಿ, ಭದ್ರಾವತಿ ತಾಲ್ಲೂಕು ಇವರುಗಳು ಇತರೆ ರೈತರನ್ನು ಕುರಿತು, ಭತ್ತದ ತಳಿಯಾದ ‘ಸಹ್ಯಾದ್ರಿ ಕೆಂಪು ಮುಕ್ತಿ’ಯು ‘ಗಂಧಸಾಲೆ’ ತಳಿಗಳು ಇತರೆ ತಳಿಗಳಿಗಿಂತ ಹೆಚ್ಚಿನ ಇಳುವರಿ, ರೋಗ ಮತ್ತು ಕೀಟಗಳ ನಿರೋಧಕ ಶಕ್ತಿ ಹೊಂದಿದೆ. ಈ ತಳಿಗಳನ್ನು ಮುಂದಿನ ವರ್ಷ ಹೆಚ್ಚು ಹೆಚ್ಚು ರೈತರು ಬೆಳೆದು ಹೆಚ್ಚಿನ ಆದಾಯವನ್ನು ಗಳಿಸಬಹುದೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಹ ವಿಸ್ತಾರಣಾ ನಿರ್ದೇಶಕರಾದ ಡಾ. ಬಿ.ಸಿ. ಹನುಮಂತಸ್ವಾಮಿ, ಮಾತನಾಡಿ, ವಿಶ್ವವಿದ್ಯಾಲಯ ಬಿಡುಗಡೆಗೊಳಿಸಿದ ಭತ್ತದ ತಳಿ ‘ಸಹ್ಯಾದ್ರಿ ಕೆಂಪು ಮುಕ್ತಿ’ ಮತ್ತು ಭತ್ತದಲ್ಲಿ ಸರಿಯಾದ ಸಮಯದಲ್ಲಿ ಕೀಟ ಮತ್ತು ರೋಗವನ್ನು ಹತೋಟಿ ಮಾಡುವುದರಿಂದ ಹೆಚ್ಚಿನ ಇಳುವರಿಯನ್ನು ಪಡೆಯಬಹುದೆಂದು ತಿಳಿಸಿದರು.
ಪ್ರಗತಿಪರ ರೈತರಾದ ಅರುಣ್ ಕುಮಾರ್ ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಸಲಹೆಯಂತೆ ಭತ್ತದ ಬೆಳೆಯಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ ಮಾಡಿಕೊಳ್ಳುವುದರಿಂದ ಹೆಚ್ಚಿನ ಇಳುವರಿ ಜೊತೆಗೆ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಬಹುದೆಂದು ತಿಳಿಸಿದರು.
ಈ ಕ್ಷೇತ್ರೋತ್ಸವದಲ್ಲಿ ಸಹ ಸಂಶೋಧನಾ ನಿರ್ದೇಶಕರಾದ ಡಾ. ಎಸ್. ಪ್ರದೀಪ್ ಹಾಗೂ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಎಲ್ಲಾ ವಿಜ್ಞಾನಿಗಳು ಭಾಗವಹಿಸಿದ್ದರು. ಈ ಕ್ಷೇತ್ರೋತ್ಸವದಲ್ಲಿ ಸುಮಾರು 75 ರೈತರು ಭಾಗವಹಿಸಿ ಮಾಹಿತಿಯನ್ನು ಪಡೆದುಕೊಂಡರು…
ವರದಿ. ಸೋಮಶೇಖರ್ ಶಿವಮೊಗ್ಗ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030