ಶಿವಮೊಗ್ಗ: ಅಲ್ ಮಹಮೂದ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರ
ಶಿವಮೊಗ್ಗ ನಗರದಲ್ಲಿ ಡೆಂಗ್ಯೂ ಜ್ವರ, ಚಿಕೂನ್‌ಗುನ್ಯಾ, ಮಲೇರಿಯಾ ಮತ್ತು ಇನ್ನಿತರ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿದ್ದು ನಗರದ ಬಹುತೇಕ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ರಕ್ತದ ಕೊರತೆ ಉಂಟಾಗುತ್ತಿರುವುದು ಕಂಡುಬಂದಿದೆ. ವೈದ್ಯರು ಹೇಳುವ ಪ್ರಕಾರ ಹೆಚ್ಚುತ್ತಿರುವ ಜನಸಂಖ್ಯಾ ಸಾಂದ್ರತೆಯು ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ಹೆಚ್ಚಿಸುತ್ತಿದೆ. ಇದರ ಜೊತೆಗೆ ನಗರದಲ್ಲಿ ಶುದ್ಧ ನೀರಿನ ಅಸಮರ್ಪಕ ಮತ್ತು ಕಳಪೆ ನೈರ್ಮಲ್ಯವು ಕಾಲರಾ, ಭೇದಿ ಮತ್ತು ಟೈಫಾಯಿಡ್‌ನಂತಹ ನೀರಿನಿಂದ ಹರಡುವ ರೋಗಗಳ ಹರಡುವಿಕೆಗೆ ಪ್ರಾಥಮಿಕ ಕೊಡುಗೆಯಾಗಿದೆ. ಸೊಳ್ಳೆಗಳಂತಹ ರೋಗ ವಾಹಕಗಳ ಅಸಮರ್ಪಕ ನಿಯಂತ್ರಣವು ಡೆಂಗ್ಯೂ ಜ್ವರ, ಚಿಕೂನ್‌ಗುನ್ಯಾ ಮತ್ತು ಮಲೇರಿಯಾದಂತಹ ರೋಗವಾಹಕಗಳಿಂದ ಹರಡುವ ರೋಗಗಳಿಗೆ ಕಾರಣವಾಗುತ್ತಿದೆ. ಇವುಗಳ ಜೊತೆಗೆ ಕಳಪೆ ಆಹಾರ, ದೈಹಿಕ ನಿಷ್ಕ್ರಿಯತೆ ಮತ್ತು ಹೆಚ್ಚಿದ ಒತ್ತಡಕ್ಕೆ ಕಾರಣವಾಗುವ ಜೀವನಶೈಲಿಯಲ್ಲಿನ ಬದಲಾವಣೆಗಳು ಕಾಯಿಲೆಗಳ ಹೆಚ್ಚಳಕ್ಕೆ ಕಾರಣವಾಗುತ್ತಿದೆ.
ಶಿವಮೊಗ್ಗ ನಗರದ ಬಹುತೇಕ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಬ್ಲಡ್ ಬ್ಯಾಂಕ್ ಗಳಲ್ಲಿ ರಕ್ತದ ಕೊರತೆ ಹೆಚ್ಚಾಗುತ್ತಿರುವುದನ್ನು ಗಮನಿಸಿದ ರೆಡ್ ಕ್ರಾಸ್ ಸಂಜೀವಿನಿ ಬ್ಲಡ್ ಸೆಂಟರ್ ನ ಗೌರವಾನ್ವಿತ ಕಾರ್ಯದರ್ಶಿಗಳಾದ ಶ್ರೀ ಮಂಜುನಾಥ ಅಪ್ಪಾಜಿ ಮತ್ತು ಸಿಬ್ಬಂದಿಗಳು ನಗರದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಅಲ್ ಮಹಮೂದ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ದಿನಾಂಕ ೧೩-೧೧-೨೦೨೪ ರ ಬುಧವಾರದಂದು ರಕ್ತದಾನ ಶಿಬಿರವನ್ನು ಹಮ್ಮಿಕೊಡಿದ್ದು, ಈ ಮಹತ್ವದ ಕಾರ್ಯಕ್ಕೆ ಜನ ಹಿತ ಸಭಾ, ಶಿವಮೊಗ್ಗ ಜಿಲ್ಲಾ ಘಟಕವು ಕೈ ಜೋಡಿಸಿರುತ್ತದೆ. ರಕ್ತ ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಕ್ತದಾನ ಶಿಬಿರವನ್ನು ಯಶಸ್ವಿಗೊಳಿಸಬೇಕೆಂದು ಕೋರಲಾಗಿದೆ…
ವರದಿ. ಸೋಮಶೇಖರ್ ಶಿವಮೊಗ್ಗ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030