ಅನ್ಯ ಭಾಷೆಗಳ ಭ್ರಮೆಯಿಂದ ಹೊರಬಂದು, ಉನ್ನತ ಸಂಸ್ಕೃತಿ ಪಸರಿಸಿ: ಗಿರಿಜಾ ಮಾಲಿಪಾಟೀಲ
ಲಿಂಗಸೂಗೂರು: ಇಂದಿನ ಯುವಜನತೆ ಆಧುನೀಕರಣ ಮತ್ತು ಜಾಗತೀಕರಣದ ಪ್ರಭಾವದಿಂದ ಬೇರೆ ಭಾಷೆಗಳಿಗೆ ಮಾರು ಹೋಗುತ್ತಿದ್ದು, ಅನ್ಯ ಭಾಷೆಗಳ ಭ್ರಮೆಯಿಂದ ಹೊರಬಂದು ಕನ್ನಡ ಭಾಷೆಯಲ್ಲಿರುವ ಉನ್ನತ ಸಂಸ್ಕೃತಿ ಪಸರಿಸಬೇಕು ಎಂದು ಖ್ಯಾತ ಲೇಖಕಿ, ಸಿದ್ದೇಶ್ವರ ಸಾಹಿತ್ಯ ವೇದಿಕೆ ರಾಜ್ಯಾಧ್ಯಕ್ಷೆ ಗಿರಿಜಾ ಮಾಲಿಪಾಟೀಲ ಕರೆ ನೀಡಿದರು.
ಸ್ಥಳೀಯ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಕನ್ನಡ ಮತ್ತು ಐಕ್ಯೂಎಸಿ ವಿಭಾಗ ಹಾಗೂ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಜಿಲ್ಲಾ ಘಟಕಗಳ ಸಂಯುಕ್ತಾಶ್ರಯದಲ್ಲಿ 69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅನ್ಯ ಭಾಷಿಕರ ಹಾವಳಿಯಿಂದ ಕನ್ನಡ ನಲುಗುತ್ತಿದೆ. ಭಾಷಾಪ್ರೇಮ ಕೇವಲ ತೋರಿಕೆಗೆ ಆಗದೇ ಕನ್ನಡದ ಅಸ್ಮಿತೆ ಕಾಪಾಡುವಂತಾಗಬೇಕು, ಸಾಹಿತ್ಯ ಅಧ್ಯಯನದಿಂದ ವಾಸ್ತವತೆ ಅರಿವಾಗುತ್ತದೆ. ಇಂಗ್ಲೀಷ್ ಕಲಿತು ಸಾಫ್ಟವೇರ್ ಕಂಪನಿಗಳಲ್ಲಿ ಜೀತ ಮಾಡುವುದಕ್ಕಿಂತ, ಕನ್ನಡ ಕಲಿತು ಸರಕಾರಿ ಉದ್ಯೋಗ ಗಿಟ್ಟಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಯುವ ಸಂಶೋಧಕ, ಪ್ರಾಧ್ಯಾಪಕ ಡಾ. ಇಸ್ಮಾಯಿಲ್ ಖಾದ್ರಿ ಕನ್ನಡ ನಾಡು-ನುಡಿ ಚಿಂತನೆ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಸರಿತಾ ಇಂಚೂರು ಪ್ರಾಸ್ತಾವಿಕ ಮಾತನಾಡಿದರು, ಪ್ರಾಧ್ಯಾಪಕ ಮಹಾದೇವಪ್ಪ ನಾಗರಾಳ, ಸಿದ್ದೇಶ್ವರ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷ ದುರ್ಗಾಸಿಂಗ್, ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಹನುಮಂತಪ್ಪ ಮಾತನಾಡಿದರು.
ಈ ಸಂದರ್ಭದಲ್ಲಿ ಐಕ್ಯೂಎಸಿ ಸಹ ಸಂಯೋಜಕ ನವೀನ್ ಚಂದಾವರಕರ್, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪಾರ್ವತಮ್ಮ, ವಿದ್ಯಾರ್ಥಿನಿಯರಾದ ಲಕ್ಕಮ್ಮ, ಸ್ವಪ್ನಾ ಸೇರಿದಂತೆ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು…
ವರದಿ. ಲಿಂಗರಾಜ್ ತಡಕಲ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030