ಪೋತ್ನಾಳದಲ್ಲಿ ನೂತನ ಆರೂಢ ಶ್ರೀ ನೂತನ ಸಹಕಾರಿ ಸಂಗ ಉದ್ಘಾಟನೆ
ಪೋತ್ನಾಳ: ಗ್ರಾಮದಲ್ಲಿ ಇಂದು ಮೌನೇಶ್ ದೇವಕಾರ್ ಅಧ್ಯಕ್ಷತೆಯಲ್ಲಿ ಆರಂಭವಾದ ಆರೂಢ ಶ್ರೀ ನೂತನ ಪತ್ತಿನ ಸಹಕಾರಿ ಸಂಘ ಆರ್ಥಿಕವಾಗಿ ಹಿಂದುಳಿದ ದೀನ ದುರ್ಬಲರಿಗೆ, ಬಡವರಿಗೆ ಆಸರೆಯಾಗಲಿ ಎಂದು ಶ್ರೀ ಆರೂಡ ಅಯ್ಯಪ್ಪ ಮಹಾಸ್ವಾಮಿಗಳು ಆಶಯ ವ್ಯಕ್ತಪಡಿಸಿದರು.
ನೂತನವಾಗಿ ಆರಂಭವಾದ ಆರೂಢ ಶ್ರೀ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಕಾರ್ಯಾಲಯ ಮತ್ತು ಸಮಾರಂಭ ಉದ್ಘಾಟಿಸಿ ಮಾತನಾಡಿದರು ಆಪತ್ತಿನ ಕಾಲಕ್ಕೆ ಆಶ್ರಯವಾಗುವುದೇ
ಆರೂಢ ಶ್ರೀ ಸಹಕಾರಿ ಸಂಘದ ಮೂಲ ಉದ್ದೇಶವಾಗಲಿ. ಇಂದು ಆರಂಭವಾದ ಈ ಸಂಘ ಸಣ್ಣಪುಟ್ಟ ವ್ಯಾಪಾರಸ್ಥರಿಗೆ, ರೈತರಿಗೆ, ನಿರುದ್ಯೋಗಿಗಳಿಗೆ ಅನುಕೂಲವಾಗಿ ಆರ್ಥಿಕವಾಗಿ ಸಬಲರಾಗುವ ನಿಟ್ಟಿನಲ್ಲಿ ಕೆಲಸ ಮಾಡಿ ಬಹಳ ಎತ್ತರಕ್ಕೆ ಬೆಳೆಯಬೇಕು. ಈ ಸಹಕಾರಿ ಸಂಘ ಉತ್ತಮವಾಗಿ ಬೆಳವಣಿಗೆಯಾಗಬೇಕಾದರೆ ನಾವೆಲ್ಲರೂ ಇದರಲ್ಲಿ ಅಕೌಂಟ್ ತೆಗೆದು ಹಣವನ್ನು ಠೇವಣಿ ಮಾಡಿಸುವ ಮೂಲಕ ವ್ಯವಹಾರ ನಡೆಸಬೇಕು. ನಾವು ಬ್ಯಾಂಕು ಅಥವಾ ಸಹಕಾರಿ ಸಂಘಕ್ಕೆ ಆಸರೆಯಾದರೆ ಅದು ನಮಗೆ ಆಸರೆಯಾಗುತ್ತದೆ. ಸಹಕಾರಿ ಸಂಘಗಳನ್ನು ಸ್ಥಾಪಿಸುವುದು ದೊಡ್ಡದೇನಲ್ಲ. ಆದರೆ ಇದನ್ನು ಬೆಳೆಸಿ ಮುನ್ನಡೆಸಿಕೊಂಡು ಹೋಗುವುದು ಕಠಿಣ ಕೆಲಸ, ಇಂತಹ ಮಹತ್ತರ ಸಾಮಾಜಿಕ ಸೇವಾ ಕಾರ್ಯ ಕೈಗೊಂಡಿರುವ ಮೌನೇಶ್ ದೇವಕಾರ್ ಮತ್ತವರ ನಿರ್ದೇಶಕ ಮಂಡಳಿಗೆ ಶುಭವಾಗಲಿ ಎಂದು ಪೂಜ್ಯರು ಹೇಳಿದರು.
ಸಾನಿಧ್ಯ ವಹಿಸಿದ್ದ ಶ್ರೀ ಸದಾನಂದ ಶರಣರು ರೌಡಕುಂದ ಬಂಗಾರಿ ಕ್ಯಾಂಪ್ ಮಹಾಸ್ವಾಮಿಗಳು ಮಾತನಾಡಿ ಒಬ್ಬರು ಇನ್ನೊಬ್ಬರಿಗೆ ಆಸರೆಯಾಗುವುದೇ ಸಹಕಾರಿ ಸಂಘದ ಮೂಲ ತತ್ವ, ಬ್ಯಾಂಕು ಅಥವಾ ಸಹಕಾರ ಸಂಘಗಳಲ್ಲಿ ಪರಸ್ಪರ ಸಹಕಾರ ಅಗತ್ಯ. ಸಹಕಾರಿ ಸಂಘ ಎಂದರೆ ಬಹಳ ಜವಾಬ್ದಾರಿಯುತವಾದ ಕ್ಷೇತ್ರ. ಇಂದು ಉದ್ಘಾಟನೆಯಾದ ಆರೂಢ ಶ್ರೀ ಸಹಕಾರಿ ಸಂಘ ಆಲದ ಮರದಂತೆ ಬಹಳ ವಿಸ್ತಾರವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಸಹಕಾರಿ ಸಂಘ ಸ್ಥಾಪನೆ ಮಾಡುವುದು ನಮ್ಮ ಬಹುದಿನದ ಕನಸಾಗಿತ್ತು. ಅದು ಇಂದು ನನಸಾಗಿದೆ. ಈ ಸಹಕಾರಿಯನ್ನು ಸ್ಥಾಪಿಸಿರುವುದು ಇತರ ಸಂಘಗಳ ಪೈಪೋಟಿಗಾಗಿ ಅಲ್ಲ. ಯಾರದೋ ವಿರೋಧಕ್ಕಾಗಿ ಅಲ್ಲ. ಯಾರನ್ನೋ ಓಲೈಸುವುದಕ್ಕಾಗಿಯೂ ಅಲ್ಲ. ಸಮಾಜದ ದುರ್ಬಲ ವರ್ಗದವರಿಗೆ, ಬಡವರಿಗೆ ಏನಾದರೂ ಅನುಕೂಲ ಮಾಡಬೇಕೆಂಬ ಉದ್ದೇಶದಿಂದ ಈ ಸಹಕಾರಿ ಆರಂಭಿಸಿದ್ದೇವೆ. ಈ ಸಹಕಾರಿ ಸಂಘ ಅಭಿವೃದ್ಧಿಯಾಗಬೇಕಾದರೆ ಎಲ್ಲ ಜಾತಿ, ಜನಾಂಗದವರ ಸಹಕಾರ ಬೇಕಾಗಿದೆ. ಆದ್ದರಿಂದ ಸಮಾಜಮುಖಿ ಕೆಲಸ ಮಾಡಲು ಮುನ್ನುಡಿ ಬರೆದ ನಮಗೆ ಎಲ್ಲರೂ ಶಕ್ತಿ ನೀಡಿ ಸಹಕರಿಸಿ ಎಂದು ಆರೂಢ ಶ್ರೀ ಸಹಕಾರಿ ಸಂಘದ ಅಧ್ಯಕ್ಷರಾದ ಮೌನೇಶ್ ದೇವಕಾರ್ ದೋತರಬಂಡಿ ಹೇಳಿದರು.
ಈ ಉದ್ಘಾಟನೆ ಸಮಾರಂಭದಲ್ಲಿ ಪೂಜ್ಯರಾದ ಶ್ರೀ ಸದಾನಂದ ಶರಣರು ರೌಡಕುಂದಾ,ಶ್ರೀ ಆರೂಢ ಅಯ್ಯಪ್ಪ ಮಹಾಸ್ವಾಮಿಗಳು ಮಲ್ಲದಗುಡ್ಡ,ಶ್ರೀ ಅಮರೇಶ ತಾತನವರು ಗೌಡನಭಾವಿ ,ಶ್ರೀ ಲಿಂಗಣ್ಣ ತಾತನವರು ಬಳಗಾನೂರ, ಮತ್ತು ನಮ್ಮ ಭಾಗದ ಪ್ರಸಿದ್ಧ ವೈದ್ಯರಾದ ಡಾ.ಬಿ ಬಸವರಾಜ ಹಾಗೂ ಡಾ.ಗುರುಶರ್ಮಾ ಮತ್ತು ಪೋತ್ನಾಳ ಸುತ್ತಮುತ್ತಲಿನ ಎಲ್ಲಾ ಸಹಕಾರಿ ಸಂಘದ ಸಿಬ್ಬಂದಿಗಳು ಮತ್ತು
ಆರೂಢ ಶ್ರೀ ಸಹಕಾರಿ ಸಂಘದ ಅಧ್ಯಕ್ಷರು ಮತ್ತು ಉಪಾದ್ಯಕ್ಷರು ನಿರ್ದೇಶಕರು ಸಿಬ್ಬಂದಿ ವರ್ಗದವರು
ಉಪಸ್ಥಿತರಿದ್ದರು…
ವರದಿ:ಲಿಂಗರಾಜ ತಡಕಲ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030