ಆಟವಾಡುತ್ತಾ ಹೋದ ಇಬ್ಬರು ಬಾಲಕರು ಕಾರಿನ ಒಳಗಡೆ ಸೇರಿ ಲಾಕ್‌ ಆದ ಘಟನೆ: ಮೊಳಕಾಲ್ಮೂರು.!!

ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮೂರು ತಾಲೂಕಿನ ಕೆರೆಕೊಂಡಾಪುರ ಗ್ರಾಮದ ಲಿಂಕೇಶ್ (4) ಹಾಗೂ ಜೀವನ್ (6) ಇಬ್ಬರೂ ಬಾಲಕರು ಮನೆಯಂಗಳದಲ್ಲಿ ಆಟವಾಡಿಕೊಂಡಿದ್ದರು. ಆಟವಾಡಿ ಮನೆಗೆ ಮರಳುತ್ತಾರೆ ಎಂದು ಪೋಷಕರು ತಮ್ಮ ಕೆಲಸದಲ್ಲಿ ಮುಳುಗಿದ್ದರು. ಆದರೆ ಗ್ರಾಮದ ಬ್ರಹ್ಮಾನಂದರೆಡ್ಡಿ ಟೀ ಅಂಗಡಿ ಬಳಿಗೆ ತೆರಳಿ ಆಟವಾಡುತ್ತಿದ್ದವರು ಸಂಜೆ ವೇಳೆಗೆ ನಾಪತ್ತೆ ಆಗಿದ್ದರು. ಸಂಜೆ ಕತ್ತಲಾದರೂ ಮಕ್ಕಳು ಮನೆಗೆ ಬಾರದಿದ್ದಾಗ ಪೋಷಕರು ಹುಡುಕಾಟ ಶುರು ಮಾಡಿದ್ದು, ಸಂಬಂಧಿಕರ ಮನೆಗಳು ಸೇರಿದಂತೆ ಊರಿಗೇ ಊರೇ ಜಾಲಾಡಿದ್ದಾರೆ. ಇನ್ನು ಸಂಜೆ ವೇಳೆ ನೋಡಿದವರು ಟೀ ಅಂಗಡಿ ಬಳಿಯೇ ಆಟವಾಡುತ್ತಿದ್ದರು ಎಂದು ಹೇಳಿದ್ದಾರೆ. ಆದರೆ ಮಕ್ಕಳು ಮಾತ್ರ ಎಲ್ಲೂ ಕಾಣದ ಕಾರಣ ಮಕ್ಕಳ ಅಪಹರಣವಾಗಿರಬಹುದು ಅಥವಾ ಯಾವುದಾದರೂ ಅಪಾಯಕ್ಕೆ ಸಿಲುಕಿರಬಹುದು ಎಂದೇ ಜನ ಭಾವಿಸಿದ್ದರು. ಇಬ್ಬರು ಮಕ್ಕಳು ನಾಪತ್ತೆಯಾದ ನಂತರ ಪೋಷಕರು ಆತಂಕಕ್ಕೊಳಗಾಗಿ ಮಕ್ಕಳನ್ನು ಹುಡುಕಿಕೊಡಿ ಎಂದು ರಾಂಪುರ ಠಾಣೆಗೆ ತೆರಳಿದ್ದು, ದೂರು ದಾಖಲಿಸಿದ್ದಾರೆ. ಯಾರೋ ದುಷ್ಕರ್ಮಿಗಳು ಅಪಹರಣ ಮಾಡಿರಬಹುದು. ದಯಮಾಡಿ ನಮ್ಮ ಮಕ್ಕಳನ್ನು ಹುಡುಕಿಕೊಡಿ ಎಂದು ಮನವಿ ಮಾಡಿಕೊಂಡಿದ್ದ ಪೋಷಕರಿಗೆ, ಪೊಲೀಸರು ಸಹ ಸಹಕರಿಸಿದ್ದಾರೆ. ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಪೊಲೀಸರು, ಮಕ್ಕಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ. ರಾತ್ರಿ ಪೂರ್ಣ ನಿದ್ದೆಯಿಲ್ಲದೆ ಪೋಷಕರು, ಪೊಲೀಸರು ಹುಡುಕಿದರೂ ಮಕ್ಕಳು ಮಾತ್ರ ಪತ್ತೆ ಆಗಿಲ್ಲ. ಏನೋ ಅವಘಡ ಸಂಭವಿಸಿದೆ ಎಂದೇ ಜನರು ಭಾವಿಸಿದ್ದರು. ಅಪಹರಣ ಆಗಿರಬಹುದು ಅಥವಾ ಆಟವಾಡಿಕೊಂಡು ಹೋಗಿ ಎಲ್ಲಾದರೂ ನೀರಿನ ತೊಟ್ಟಿ, ಬಾವಿಗಳಿಗೆ ಬಿದ್ದಿರಬಹುದು ಎಂದು ಹುಡುಕಾಟದಲ್ಲಿ ತೊಡಗಿದ್ದರು. ಬೆಳಗ್ಗೆ ಏಳು ಗಂಟೆ ವೇಳೆಗೆ ಗ್ರಾಮದ ಪ್ರವೀಣ್ ಎಂಬುವರು ಕಾರೊಂದರಲ್ಲಿ ಮಕ್ಕಳ ಸೌಂಡ್ ಕೇಳಿ ತಿರುಗಿ ನೋಡಿದಾಗ ಮಕ್ಕಳಿರುವುದು ಪತ್ತೆ ಆಗಿದೆ. ನಾಪತ್ತೆಯಾದ ಮಕ್ಕಳ ಮನೆ ಬಳಿಯೇ ಮರೆಯಲ್ಲಿ ನಿಂತಿದ್ದ ಇಂಡಿಗೋ ಕಾರಲ್ಲಿ ಲಿಂಕೇಶ್ ಮತ್ತು ಜೀವನ್ ಪತ್ತೆ ಆಗಿದ್ದಾರೆ. ಆಗ ಸಂಜೆ ವೇಳೆ ಆಟವಾಡುತ್ತ ಕಾರು ಹೊಕ್ಕಿದ್ದ ಬಾಲಕರು ಹೊರಬರಲಾಗದೆ ಅಲ್ಲೇ ನಿದ್ರೆಗೆ ಜಾರಿದ್ದಾರೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಬಳಿಕ ಪೊಲೀಸರು ಮತ್ತು ವೈದ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು ಆರೋಗ್ಯ ತಪಾಸಣೆ ನಡೆಸಿದ್ದಾರೆ. ಸದ್ಯ ಸಕಾಲಕ್ಕೆ ಮಕ್ಕಳ ರಕ್ಷಣೆ ಆಗಿದೆ ಎಂದು ಎಸ್​ಪಿ ಜಿ.ರಾಧಿಕಾ ತಿಳಿಸಿದರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *