ಮಕ್ಕಳೇ ಭವಿಷ್ಯದಲ್ಲಿ ಕನ್ನಡ ಭಾಷೆ ಉಳಿಸಿ ಬೆಳೆಸುವ ರಾಯಭಾರಿಗಳು : ಮಕ್ಕಳ ಸಾಹಿತ್ಯ ಪರಿಷತ್ತು ಅಧ್ಯಕ್ಷ ಟಿ.ಪಿ.ಉಮೇಶ್
ಅಮೃತಾಪುರದಲ್ಲಿ ಕನ್ನಡ ಕಂಪು – ಕನ್ನಡ ನುಡಿ ಹಬ್ಬ
ಹೊಳಲ್ಕೆರೆ : ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದರು ಪ್ರಸ್ತುತ ಅನ್ಯಭಾಷಿಕರು ಕರ್ನಾಟಕದಲ್ಲಿ ಖಾಸಗಿ ಶಿಕ್ಷಣ, ವೈದ್ಯಕೀಯ, ತಂತ್ರಜ್ಞಾನ ಮತ್ತು ಔದ್ಯೋಗಿಕ ಕ್ಷೇತ್ರದ ಬಹುಪಾಲು ಉದ್ಯೋಗಗಳನ್ನು ಪಡೆಯುತ್ತಿದ್ದಾರೆ. ಭವಿಷ್ಯದಲ್ಲಿ ನಮ್ಮ ಮಕ್ಕಳಾದ ಶಾಲಾ ವಿದ್ಯಾರ್ಥಿಗಳೇ ಕನ್ನಡ ಭಾಷೆ ಉಳಿಸಿ ಬೆಳೆಸುವ ರಾಯಭಾರಿಗಳಾಗಬೇಕಿದೆ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರು ಹಾಗು ಹೊಳಲ್ಕೆರೆ ಮಕ್ಕಳ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಟಿ.ಪಿ.ಉಮೇಶ್ ಹೇಳಿದರು.
ಹೊಳಲ್ಕೆರೆ ಅಮೃತಾಪುರ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಕಂಪು ಕನ್ನಡ ನುಡಿ ಹಬ್ಬ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಭಾರತ ದೇಶ ಹಲವಾರು ಭಾಷೆಗಳ ತವರು. ಕನ್ನಡ ಕರ್ನಾಟಕದ ಪ್ರಾಂತೀಯ ಭಾಷೆ. ಶಾಸ್ತ್ರೀಯ ಸ್ಥಾನಮಾನ ಪಡೆದ ಭಾಷೆ. ಕನ್ನಡ ನಾಡಿಗೆ ಅನ್ಯ ಭಾಷಿಕರ ವಿಪರೀತ ಬರುವಿಕೆಯಿಂದ ಕನ್ನಡಿಗರು ಉದ್ಯೋಗಗಳ ನಷ್ಟದ ಜೊತೆಗೆ ಕನ್ನಡ ಭಾಷೆಯ ಅವನತಿಯ ಮುನ್ಸೂಚನೆ ಕಾಣುವಂತಾಗಿದೆ. ಇಂದು ಕನ್ನಡಿಗರ ಕರ್ನಾಟಕ ಸರ್ಕಾರವೇ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತೆರೆದು ಶಿಕ್ಷಣ ನೀಡುತ್ತಿದೆ. ಶಿಕ್ಷಣದಲ್ಲಿ ಹಾಗು ಆಡಳಿತದಲ್ಲಿ ಕನ್ನಡ ಭಾಷೆ ಬಳಕೆ ಜಾರಿಗೆ ಗೋಕಾಕ ಚಳುವಳಿಗಳು ನಡೆದದ್ದು ಸತ್ಯವೇ ಎಂದು ಇನ್ನು ಕೆಲವೇ ವರ್ಷಗಳಲ್ಲಿ ಸೋಜಿಗ ಪಡುವ ಕಾಲ ಬರುತ್ತದೆ. ಬಾಲ್ಯದಿಂದಲೇ ಶಾಲಾ ವಿದ್ಯಾರ್ಥಿಗಳಿಗೆ ಕನ್ನಡ ಹಾಡು ಪದ್ಯ ಕತೆ ಸಾಹಿತಿಗಳ ಕುರಿತು, ಕನ್ನಡ ಭಾಷೆಯ ಪ್ರಾಚೀನತೆ ಕುರಿತು, ಹಬ್ಬ ಜಾತ್ರೆ ಹರಿದಿನಗಳು, ಹಳ್ಳಿಯ ಕಸುಬುಗಳ ಪರಿಚಯ ಮಾಡಿಕೊಡಬೇಕಿದೆ. ಹೆಚ್ಚಾಗಿ ಮಕ್ಕಳ ಸಾಹಿತ್ಯ ಓದು ಬರಹದ ಮೂಲಕ ಕನ್ನಡ ಭಾಷೆಯನ್ನು ಬೆಳೆಸಲು ವಿದ್ಯಾರ್ಥಿಗಳನ್ನು ಸನ್ನದ್ಧಗೊಳಿಸಬೇಕಿದೆ ಎಂದು ಹೇಳಿದರು.
ಶಾಲಾ ವಿದ್ಯಾರ್ಥಿಗಳಾದ ಮಾನಸ, ಉಷ, ದೀಕ್ಷಾ, ತನುಶ್ರೀ ಕನ್ನಡ ನಾಡು ನುಡಿ ಸಾಗಿ ಬಂದ ದಾರಿಯ ಕುರಿತು ಭಾಷಣ ಮಾಡಿದರು. ದೀಕ್ಷಾ ಮತ್ತು ಸಂಗಡಿಗರು ಕನ್ನಡ ನಾಡಿನ ಜೀವನದಿ ಹಾಗು ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಹಾಡುಗಳಿಗೆ ನೃತ್ಯ ಮಾಡಿದರು. ಅಮೃತಾಪುರ ಶಾಲೆ ಹಾಗು ಮಕ್ಕಳ ಸಾಹಿತ್ಯ ಪರಿಷತ್ತು ವತಿಯಿಂದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ಡಿ.ಸಿದ್ಧಪ್ಪ, ಸಹಶಿಕ್ಷಕಿ ಜಿ.ಎನ್.ರೇಷ್ಮಾ ಅಕ್ಷರ ದಾಸೋಹ ಕಾರ್ಯಕರ್ತರಾದ ತಿಮ್ಮಕ್ಕ, ಶಾರದಮ್ಮ ಮತ್ತು ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030