ಬೆಳೆ ಸಮೀಕ್ಷೆ ಕಾರ್ಯ; ನಿಖರ ಮಾಹಿತಿ ನಮೂದಿಸಿ: ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ ಸೂಚನೆ
ಬಳ್ಳಾರಿ:ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯ ಚಾಲ್ತಿಯಲ್ಲಿದ್ದು, ಖಾಸಗಿ ನಿವಾಸಿಗಳು ಮತ್ತು ಮೇಲ್ವಿಚಾರಕರು ರೈತರ ಜಮೀನು ಬೆಳೆಗಳ ಮಾಹಿತಿಯನ್ನು ನಿಖರವಾಗಿ ನಮೂದಿಸಬೇಕು. ಇದಕ್ಕೆ ಆಯಾ ತಾಲ್ಲೂಕು ತಹಶೀಲ್ದಾರರು ನಿಗಾವಹಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಹೇಳಿದರು.
ಮಂಗಳವಾರ ಬೆಳೆ ಸಮೀಕ್ಷೆಯ ಕುರಿತು ಎಲ್ಲಾ ತಹಶೀಲ್ದಾರರೊಂದಿಗೆ ವಿಡೀಯೋ ಸಂವಾದ ಸಭೆ ನಡೆಸಿ ಅವರು ಮಾತನಾಡಿದರು.
ಬೆಳೆ ಸಮೀಕ್ಷೆ ಪ್ರಕ್ರಿಯೆಯನ್ನು ಮೊಬೈಲ್ ಆಪ್ ಬಳಸಿ ಮಾಡಲಾಗುತ್ತಿದ್ದು, ಗ್ರಾಮ ನಕಾಶೆ ಅಳವಡಿಸಿರುವುದರಿಂದ ಆಯಾ ತಾಕಿನ ಗಡಿ ರೇಖೆಯೊಳಗೆ ಹೋಗಿ ಜಿಪಿಎಸ್ ನಿಖರತೆ ಪಡೆದು ಛಾಯಾಚಿತ್ರದೊಂದಿಗೆ ಬೆಳೆಯ ವಿವರಗಳನ್ನು ದಾಖಲು ಮಾಡಬೇಕು. ಆಯಾ ತಾಕಿನಲ್ಲಿ ಎಲ್ಲಾ ಬೆಳೆಗಳ ವಿವರಗಳನ್ನು ಕಡ್ಡಾಯವಾಗಿ ದಾಖಲು ಮಾಡಬೇಕು ಎಂದು ಅವರು ತಿಳಿಸಿದರು.
ತಾಲ್ಲೂಕು ಮಟ್ಟದ ಸಮಿತಿಯ ಮೂಲಕ ಬೆಳೆ ಸಮೀಕ್ಷೆ ಚಟುವಟಿಕೆಯನ್ನು ನಡೆಸಲು ಗ್ರಾಮವಾರು ಖಾಸಗಿ ನಿವಾಸಿಗಳು ಮತ್ತು ಮೇಲ್ವಿಚಾರಕರನ್ನು ನೇಮಿಸಬೇಕು. ಅವರಿಗೆ ಅಗತ್ಯ ತರಬೇತಿ ನೀಡಬೇಕು ಎಂದು ತಹಶೀಲ್ದಾರರಿಗೆ ನಿರ್ದೇಶನ ನೀಡಿದರು.
ಪ್ರಸ್ತಕ ವರ್ಷದಲ್ಲಿ ಅತೀ ಹೆಚ್ಚು ರೈತರು ಬೆಳೆ ವಿಮೆಗೆ ನೋಂದಾಯಿಸಿಕೊoಡಿದ್ದು, ಎಲ್ಲಾ ವಿಧದ ಬೆಳೆಗಳು ಮತ್ತು ಮಿಶ್ರ ಬೆಳೆಗಳ ಮಾಹಿತಿಯನ್ನು ನಮೂದಿಸಬೇಕು. ಇದಕ್ಕೆ ರೈತರ ಸಹಕಾರವು ಪಡೆಯಬೇಕು ಎಂದು ತಿಳಿಸಿದರು.
ಬೆಳೆ ಸಮೀಕ್ಷೆಯ ಕಾರ್ಯವು ಸೆ.31 ರ ವರೆಗೆ ನಡೆಯಲಿದ್ದು, ಗ್ರಾಮವಾರು ಪಟ್ಟಿಮಾಡಿಕೊಂಡು ಗುರಿ ನಿಗದಿಪಡಿಸಿ ಪೂರ್ಣಗೊಳಿಸಬೇಕು. ಆಯಾ ತಹಶೀಲ್ದಾರರು ವಾರಕ್ಕೊಮ್ಮೆ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಜಂಟಿ ಕೃಷಿ ನಿರ್ದೇಶಕ ಡಾ.ಸೋಮಸುಂದರ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಗೆ 3.50 ಲಕ್ಷ ತಾಕುಗಳಲ್ಲಿ ಬೆಳೆ ಸಮೀಕ್ಷೆ ಕೈಗೊಳ್ಳಲು ಗುರಿ ನಿಗಧಿಯಾಗಿದೆ. ಬಳ್ಳಾರಿ ತಾಲ್ಲೂಕಿನಲ್ಲಿ 1,21,488, ಕಂಪ್ಲಿ ತಾಲ್ಲೂಕಿನಲ್ಲಿ 42,507, ಕುರುಗೋಡಿನಲ್ಲಿ 54,093, ಸಂಡೂರು ತಾಲ್ಲೂಕಿನಲ್ಲಿ 50,134 ಹಾಗೂ ಸಿರುಗುಪ್ಪ ತಾಲ್ಲೂಕಿನಲ್ಲಿ 1,33,054 ತಾಕುಗಳಲ್ಲಿ ಬೆಳೆ ಸಮೀಕ್ಷೆ ಕೈಗೊಳ್ಳಬೇಕಾಗಿದ್ದು, ಪ್ರಸ್ತುತ 86,177 ತಾಕುಗಳಲ್ಲಿ ಬೆಳೆ ಸಮೀಕ್ಷೆ ಪೂರ್ಣಗೊಂಡಿದ್ದು, ಬೆಳೆ ಸಮೀಕ್ಷೆ ಪ್ರಗತಿಯಲ್ಲಿದೆ ಎಂದು ಅವರು ಸಭೆಗೆ ತಿಳಿಸಿದರು.
ಬೆಳೆ ಸಮೀಕ್ಷೆ ಮೂಲಕ ಸಂಗ್ರಹಿಸಿದ ಮಾಹಿತಿಯನ್ನು ಬೆಳೆ ನಷ್ಟ ಪರಿಹಾರ, ಕನಿಷ್ಟ ಬೆಂಬಲ ಬೆಲೆ ಯೋಜನೆ, ಪಹಣಿಯಲ್ಲಿ ಬೆಳೆ ನಮೂದು ಮಾಡಲು, ಬೆಳೆ ವಿಮಾ ಯೋಜನೆ, ಬೆಳೆ ಸಾಲ ಇತ್ಯಾದಿ ಸೌಲಭ್ಯ ಒದಗಿಸಲು ಬಳಸಲಾಗುವುದು ಎಂದರು.
ರೈತರು ತಮ್ಮ ಬೆಳೆಗಳ ಮಾಹಿತಿ ನಮೂದು ಮಾಡಬಹುದು. ಒಂದು ವೇಳೆ ಸ್ವತಃ ರೈತರೆ ತಮ್ಮ ಬೆಳೆ ದಾಖಲು ಮಾಡಲು ಗೊಂದಲವಿದ್ದಲ್ಲಿ ಗ್ರಾಮಕ್ಕೆ ನಿಯೋಜಿಸಿರುವ ಖಾಸಗಿ ನಿವಾಸಿ (ಪಿ.ಆರ್.)ಗಳನ್ನು ಸಂಪರ್ಕಿಸಿ ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ಪಿ.ಆರ್. ಆಪ್ ಮೂಲಕ ದಾಖಲಿಸಬಹುದು ಎಂದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್, ಎಎಸ್ಪಿ ನವೀನ್ ಕುಮಾರ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030