ಬೆಳಗಾವಿಯ ಜಿಲ್ಲಾ ಔಷಧ ಉಗ್ರಾಣದ ಮೇಲೆ ಲೋಕಾ ದಾಳಿ : ನಿಷೇದಿತ ಗ್ಲುಕೋಸ್​ ಪತ್ತೆ…!!!

ಬೆಳಗಾವಿಯ ಜಿಲ್ಲಾ ಔಷಧ ಉಗ್ರಾಣದ ಮೇಲೆ ಲೋಕಾ ದಾಳಿ : ನಿಷೇದಿತ ಗ್ಲುಕೋಸ್​ ಪತ್ತೆ

ಬೆಳಗಾವಿ : ಬಳ್ಳಾರಿಯಲ್ಲಿ ಬಾಣಂತಿಯರ ಸಾವಿಗೆ ಗ್ಲುಕೋಸ್ ಕಾರಣ ಎನ್ನುವ ಪ್ರಕರಣ ರಾಜ್ಯದಲ್ಲಿ ಸಂಚಲನ‌ ಸೃಷ್ಟಿಸಿದೆ. ಸರ್ಕಾರ ಕೂಡಾ ಪಿ.ಬಿ.ಪಿ. ಸಂಸ್ಥೆ ಪೂರೈಸಿದ ಐವಿ ಗ್ಲುಕೋಸ್ ಆರ್.ಎಲ್.ಐ ಬಳಸದಂತೆ ಆದೇಶಿಸಿದೆ.‌ಈ ಮಧ್ಯೆ ಬೆಳಗಾವಿಯಲ್ಲಿ ಜಿಲ್ಲಾ ಔಷಧಿ ಉಗ್ರಾಣದ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ.
ದಾಳಿ ವೇಳೆ ಆರ.ಎಲ್.ಐ ಐವಿ ಗ್ಲುಕೋಸ್ ಪತ್ತೆಯಾಗಿದ್ದು, ಇದನ್ನ ಹೆಚ್ಚಿನ ತನಿಖೆಗಾಗಿ ಲ್ಯಾಬ್ ಗೆ ಕಳುಹಿಸಲು ಲೋಕಾಯುಕ್ತ ಅಧಿಕಾರಿಗಳು ಮುಂದಾಗಿದ್ದಾರೆ.

ರಾಜ್ಯದಲ್ಲಿಯೇ ಬಳ್ಳಾರಿ ಬಾಣಂತಿಯರ ಸಾವಿನ‌ ಪ್ರಕರಣ ಸಂಚಲನ‌ ಸೃಷ್ಟಿಸಿದೆ. ಬಳ್ಳಾರಿ ಆಸ್ಪತ್ರೆಯಲ್ಲಿ ನಾಲ್ವರು ಬಾಣಂತಿಯರ ಸಾವಿಗೆ ಆರ.ಎಲ್.ಐ ಗ್ಲುಕೋಸ್ ಕಾರಣ ಅನ್ನೋ ಶಂಕೆ ವ್ಯಕ್ತವಾಗಿದೆ. ಇದನ್ನ ತಕ್ಷಣದಿಂದಲೇ ಬಳಕೆ ಮಾಡದಂತೆ ಆರೋಗ್ಯ ಇಲಾಖೆ ಎಲ್ಲಾ ಜಿಲ್ಲೆ ಔಷಧೀಯ ಉಗ್ರಾಣಕ್ಕೆ ಸೂಚಿಸಿದೆ. ಈ ಪ್ರಕರಣವನ್ನ‌ ಸರ್ಕಾರ ಮತ್ತು ಲೋಕಾಯುಕ್ತ ಕೂಡಾ ಗಂಭೀರವಾಗಿ ಪರಿಗಣಿಸಿದೆ.

ಇಂದು ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲಿ ಇರೋ ಜಿಲ್ಲಾ ಔಷಧೀಯ ಉಗ್ರಾಣದ ಮೇಲೆ ದಿಢೀರ್ ಲೋಕಾಯುಕ್ತ ದಾಳಿ ನಡೆಸಿದೆ. ಬೆಳಗಾವಿ ಲೋಕಾಯುಕ್ತ ಎಸ್ಪಿ ಹನುಮಂತರಾಯ ನೇತೃತ್ವದಲ್ಲಿ 8 ಜನ‌ ಅಧಿಕಾರಿಗಳ ತಂಡದ ದಾಳಿ ವೇಳೆ ಪಿ.ಬಿ.ಐ ಸಂಸ್ಥೆ ಸರಬರಾಜು ಮಾಡಿರುವ ಐವಿ ಗ್ಲುಕೋಸ್ ಬಾಕ್ಸಗಳು ಪತ್ತೆಯಾಗಿವೆ. ಹೆಚ್ಚಿನ ಪ್ರಮಾಣದಲ್ಲಿ ಶೇಖರಿಸಿ ಇಟ್ಟಿದ್ದ ಬಾಕ್ಸ್ ಕಂಡು ಸ್ವಯಂ ಲೋಕಾಯುಕ್ತ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಬೆಳಗಾವಿ ಜಿಲ್ಲೆಗೂ ಪಿ.ಬಿ.ಐ ಸಂಸ್ಥೆಯಿಂದ ಆರ.ಎಲ್.ಐ ಐವಿ ಗ್ಲುಕೋಸ್ ಏಪ್ರಿಲ್ ತಿಂಗಳಿಂದಲೇ ಪೂರಕೆ ಆಗಿದೆ. ಇದನ್ನೇ ಈಗಾಗಲೇ ಬೆಳಗಾವಿ ಜಿಲ್ಲೆಯ ಎಲ್ಲಾ ತಾಲ್ಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಪೂರೈಕೆ ಆಗಿರೋ ವಿಚಾರವು ಲೋಕಾಯುಕ್ತ ದಾಳಿ ವೇಳೆ ಬೆಳಕಿಗೆ ಬಂದಿದೆ. ಸ್ವತಃ ಲೋಕಾಯುಕ್ತ ಎಸ್ಪಿ ಹನುಮಂತರಾಯ ಉಗ್ರಾಣದಲ್ಲಿ ಶೇಖರಿಸಿ ಇಡಲಾಗಿರೋ ಪ್ರತಿಯೊಂದು ಔಷಧೀಯಗಳನ್ನ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಕೆಲವು ಔಷಧಿಗಳ ಬಳಕೆಯ ಅವಧಿ ಮುಗಿದರು ಉಗ್ರಾಣದಲ್ಲಿ ಶೇಖರಿಸಿ ಇಡಲಾಗಿರೋದು ಬೆಳಕಿಗೆ ಬಂದಿದೆ.
ಇನ್ನೂ ಬಳ್ಳಾರಿಯಲ್ಲಿ ಬಾಣಂತಿಯರ ಬಲಿ ಪಡೆದ ಪಿ.ಬಿ.ಪಿ ಸಂಸ್ಥೆ ಪೂರೈಸಿದ ಆರ.ಎಲ್.ಐ ಐವಿ ಗ್ಲುಕೋಸ್ ಬಾಕ್ಸ್ ಗಳನ್ನ ಬೆಳಗಾವಿ ಲೋಕಾಯುಕ್ತ ಅಧಿಕಾರಿಗಳು ಸೀಜ್ ಮಾಡಿದ್ದಾರೆ.‌ ಸೀಜ್ ಮಾಡಿದ ಐವಿ ಗ್ಲುಕೋಸ್ ಬಾಕ್ಸ್​ಗಳ ಸ್ಯಾಂಪಲ್ ಅನ್ನ ತಪಾಸಣೆಗಾಗಿ ಲ್ಯಾಬ್​ಗೆ ರವಾನಿಸಲಾಗಿದೆ. ಇತ್ತ ಉಗ್ರಾಣದ ಅಧಿಕಾರಿಗಳನ್ನ ಲೋಕಾಯುಕ್ತ ಎಸ್ಪಿ ಹನುಮಂತರಾಯ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಉಗ್ರಾಣದಲ್ಲಿ ಅವಧಿ ಮುಗಿದಿರೋ‌ ಔಷಧೀಗಳು ಪತ್ತೆ ಆಗಿರುವುದನ್ನ ಕಂಡು ಲೋಕಾಯುಕ್ತ ಅಧಿಕಾರಿಗಳು ಗರಂ‌ ಆಗಿದ್ದಾರೆ. ಇನ್ನೂ ಲ್ಯಾಬ್​ಗೆ ಕಳುಸಿದ ಐವಿ ಗ್ಲುಕೋಸ್ ಬೆಳಗಾವಿ ಜಿಲ್ಲೆಯ ಯಾವ ಯಾವ ಆರೋಗ್ಯ ಕೇಂದ್ರಗಳಿಗೆ ಎಷ್ಟು ಪ್ರಮಾಣದಲ್ಲಿ ಪೂರೈಸಲಾಗಿದೆ ಅನ್ನೋ ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.‌ ಏಪ್ರಿಲ್ ತಿಂಗಳಿಂದ ಈವರೆಗೂ ಜಿಲ್ಲೆಯಲ್ಲಿ ಹೆರಿಗೆ ಆಗಿರೋ ಮತ್ತು ಬಾಣಂತಿಯರ ಸಾವಿನ ಪ್ರಕರಣಗಳ ಸಂಪೂರ್ಣ ಮಾಹಿತಿ ಒದಗಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಖಡಕ್ಕಾಗಿ ಲೋಕಾಯುಕ್ತ ಎಸ್ಪಿ ಸೂಚಿಸಿದ್ದಾರೆ.
ಒಟ್ಟಿನಲ್ಲಿ ಬಳ್ಳಾರಿಯ ವಿಮ್ಸ್​ ಅವ್ಯವಸ್ಥೆಯಿಂದ ರಾಜ್ಯದಲ್ಲಿ ಆರೋಗ್ಯ ಇಲಾಖೆಯಲ್ಲಿನ ಅವ್ಯವಸ್ಥೆಗಳು ಹೊರಬರುತ್ತಿದ್ದು. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಅಮಾಯಕ ಜೀವ ಉಳಿಸುವ ಕೆಲಸ ಮಾಡಬೇಕಿದೆ…

ವರದಿ. ಮಹಾಲಿಂಗ ಗಗ್ಗರಿ, ಬೆಳಗಾವಿ

Leave a Reply

Your email address will not be published. Required fields are marked *