“ಜಿಲ್ಲಾ ಕೌಶಲ್ಯ ಸಮಿತಿ” ಸಭೆ
ಕೌಶಲ್ಯಾಧಾರಿತ ಉದ್ಯೋಗ ತರಬೇತಿ ಹೆಚ್ಚಿಸಿ: ಡಾ. ಇ.ವಿ ರಮಣರೆಡ್ಡಿ
ಬೆಳಗಾವಿ,: ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತರಬೇತಿ ಪಡೆಯುವ ಮೂಲಕ ಕೌಶಲ್ಯಾಧಾರಿತ ಉದ್ಯೋಗಾವಕಾಶಗಳು ದೊರಕುವಂತೆ ಮಾಡಬಹುದು. ಜಿಲ್ಲೆಯ ದೊಡ್ಡ ಕೈಗಾರಿಕೆಗಳೊಂದಿಗೆ ಸಭೆ ನಡೆಸಿ ಬೇಡಿಕೆಗಳ ಪಟ್ಟಿ ರಚಿಸಬೇಕು. ಭವಿಷ್ಯದ ಕೌಶಲ್ಯ ಗಳಿಗೆ ಒತ್ತು ನೀಡುವ ಮೂಲಕ ಜಾಗತಿಕ ಉದ್ಯೋಗ ಮಾರುಕಟ್ಟೆಯಲ್ಲಿ ಹೆಚ್ಚಿನ ಉದ್ಯೋಗಗಳು ಜಿಲ್ಲೆಯ ಉದ್ಯೋಗಾಕಾಂಕ್ಷಿಗಳಿಗೆ ದೊರಕಲಿವೆ ಎಂದು ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಇ.ವಿ ರಮಣರೆಡ್ಡಿ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸೋಮವಾರ ನಡೆದ ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರದ “ಜಿಲ್ಲಾ ಕೌಶಲ್ಯ ಸಮಿತಿ” ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿವಿಧ ಸುಧಾರಣೆಗಳೊಂದಿಗೆ ದೇಶದ ತಳಮಟ್ಟವನ್ನು ತಲುಪಲು ಮತ್ತು ಪ್ರತಿಯೊಬ್ಬರನ್ನು ಸಬಲೀಕರಣಗೊಳಿಸುವ ಸಲುವಾಗಿ, ಕೌಶಲ್ಯ ಅಭಿವೃದ್ಧಿ ಅವಕಾಶಗಳಿಗಾಗಿ ವ್ಯವಸ್ಥೆಯನ್ನು ಬಲಪಡಿಸಲು ಜಿಲ್ಲಾ ಮಟ್ಟದಲ್ಲಿ ಕೌಶಲ್ಯ ಸಮಿತಿಗಳನ್ನು ರಚನೆ ಮಾಡಲಾಗಿದೆ. ಭಾರತ ಸರ್ಕಾರವು 2014 ರ ನಂತರ ವಿವಿಧ
ಕೌಶಲ್ಯಾಭಿವೃದ್ಧಿ ಸಂಬಂಧಿಸಿದ ಯೋಜನೆಗಳನ್ನು ಪ್ರಾರಂಭಿಸಿದೆ. ಕೌಶಲ್ಯ ಅಭಿವೃದ್ಧಿ ಯೋಜನೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕರ್ನಾಟಕ ಕೌಶಲ್ಯಾಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲಾಗಿದೆ ಎಂದರು.
ತರಬೇತಿಗಳನ್ನು ಉದ್ಯೋಗಾಕಾಂಕ್ಷಿಗಳಿಗೆ ಮಾಹಿತಿ ನೀಡುವಂತೆ ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ತರಬೇತಿಗಳನ್ನು ಆಯೋಜಿಸಬೇಕು ಎಂದು ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಇ.ವಿ ರಮಣರೆಡ್ಡಿ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿ, ಮಾರಾಟ, ಪ್ರಚಾರಕ್ಕೆ ಸಂಬಂಧಿಸಿದಂತೆ ಎಂಬಿಎ ಪದವಿ ಹೊಂದಿರುವ ಸಾಕಷ್ಟು ವಿದ್ಯಾರ್ಥಿಗಳಿದ್ದಾರೆ. ಎಲ್ಲ ಕ್ಷೇತ್ರಗಳಲ್ಲಿ ತರಬೇತಿ ನೀಡಲು ಸಂಪನ್ಮೂಲ ವ್ಯಕ್ತಿಗಳನ್ನು ನಿಯೋಜಿಸಬೇಕು.
ವಿವಿಧ ಕಂಪನಿಗಳಲ್ಲಿ ಸಾಕಷ್ಟು ಉದ್ಯೋಗಗಳಿವೆ ಅದರ ಬೇಡಿಕೆಯಂತೆ ಸಾಕಷ್ಟು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಅನುಭವದ ಕೊರತೆ ಎದುರಾಗುತ್ತಿದೆ. ಹಾಗಾಗಿ ಮುಂದಿಂದ ದಿನಗಳಲ್ಲಿ ವಿವಿಧ ಕಂಪನಿಗಳ ಹೆಚ್.ಆರ್ ಗಳನ್ನು ಸಭೆಗೆ ಆಹ್ವಾನಿಸಿ ಮಾಹಿತಿ ಪಡೆದುಕೊಳ್ಳಬೇಕು ಎಂದು ಹೇಳಿದರು.
ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಜಿಲ್ಲಾ ಮಟ್ಟದ ಕೌಶಲ್ಯ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಜಿಲ್ಲೆಯ 20 ಮುಂಚೂಣಿಯ ಕಂಪನಿಗಳ ಹೆಚ್.ಆರ್. ಗಳನ್ನ ಸಭೆಗೆ ಆಹ್ವಾನಿಸಿ ಸಲಹೆಗಳನ್ನು ಪಡೆದುಕೊಳ್ಳಬೇಕು. ನಂತರ ಅದಕ್ಕೆ ಪೂರಕವಾಗಿ ತರಬೇತಿಗಳನ್ನು ಕಾರ್ಯಕ್ರಮಗಳನ್ನು ಏರ್ಪಡಿಸಬಹುದು. ಕಲಿಕೆ ಜ್ಯೋತಿ, ಉದ್ಯೋಗ ಸೇರಿದಂತೆ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಎಲ್ಲ ಅಧಿಕಾರಿಗಳು ಶ್ರಮಿಸಬೇಕು ಎಂದು ಹೇಳಿದರು.
ಕೈಗಾರಿಕೆ ಇಲಾಖೆಯಿಂದ ಉತ್ಪನ್ನ, ಅಕೌಂಟ್, ಮಾರುಕಟ್ಟೆ ಕ್ಷೇತ್ರದಲ್ಲಿ ಎಲ್ಲ ಕೈಗಾರಿಕೆ ಕಂಪನಿಗಳಿಗೆ ಭೇಟಿ ನೀಡಿ ಅಗತ್ಯ ಮಾಹಿತಿಯನ್ನು ಕಲೆಹಾಕಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಕೈಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಹಾಂತೇಶ ಮುರಗೋಡ ಮಾತನಾಡಿ, ಜಾಂಬೋಟಿಯಲ್ಲಿ ಜೇನು ಸಾಕಾಣಿಕೆ ಹೆಚ್ಚಾಗಿದ್ದು, ತೋಟಗಾರಿಕೆ ಇಲಾಖೆಯಿಂದ ಜೇನು ಸಾಕಾಣಿಕೆ ತರಬೇತಿ ನೀಡಲಾಗುತ್ತಿದೆ. ಆ ಭಾಗದಲ್ಲಿ ಕಾಡು ಜೇನು ಹಾಗೂ ಪೆಟಿಗೆ ಮೂಲಕ ಜೇನು ಸಾಕಾಣಿಕೆ ಮಾಡಿ ಮಾರಾಟ ಮಾಡಲಾಗುತ್ತಿದೆ ಇದೆ ಮಾದರಿಯಲ್ಲಿ ಯುವಕರಿಗೆ ತರಬೇತಿ ನೀಡಬೇಕು ಎಂದು ಹೇಳಿದರು.
ತರಬೇತಿ ಮಾಹಿತಿ:
ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರದ ನಿರ್ವಾಹಕ ನಿರ್ದೇಶಕ ನವಾಜ್ ಮಾತನಾಡಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಸಮಿತಿ 2018 ರಲ್ಲಿ ಪ್ರಾರಂಭಿಸಲು ಕೇಂದ್ರ ಸರ್ಕಾರ ನಿರ್ದೇಶನ ನೀಡಿತು. ಈ ಕಮಿಟಿಯಲ್ಲಿ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು, ಕೈಗಾರಿಕಾ ಉದ್ಯಮದಾರರು ಸದಸ್ಯರಿರುವರು. ಅದೇ ರೀತಿಯಲ್ಲಿ ಕೃಷಿ ಇಲಾಖೆಯ ಉಪ ಸಮಿತಿಗಳನ್ನು ಸಹ ರಚಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಅಗತ್ಯವಿರುವ ಎಲ್ಲ ಕ್ಷೇತ್ರಗಳಲ್ಲಿ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಜಿಲ್ಲಾಮಟ್ಟದಲ್ಲಿ ಕೈಗೊಳ್ಳಲಾಗುತ್ತಿರುವ ಕಮಿಟಿಯ ಮಾರ್ಗಸೂಚಿಗಳು, ಯೋಜನೆಗಳು, ಅನುಷ್ಠಾನ ಮಾದರಿ, ಯೋಜನೆಗಳ ಅನುಷ್ಠಾನ ಸವಾಲುಗಳ ಕುರಿತು ವಿವರಿಸಿದರು.
ಕೇಂದ್ರ ಸರ್ಕಾರ ಸಂಕಲ್ಪ ಯೋಜನೆಯಡಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಸಹ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ. ಕಲಿಕೆ ಜೊತೆ ಕೌಶಲ್ಯ ಯೋಜನೆಯ ಮೂಲಕ 8ರಿಂದ 10ನೇ ತರಗತಿ ಶಾಲಾ ಮಕ್ಕಳಿಗೆ ವಾರದ ಒಂದು ದಿನ ಎಲ್ಲ ಕ್ಷೇತ್ರಗಳಲ್ಲಿನ ವೃತ್ತಿಪರ ತರಬೇತಿ ನೀಡಬಹದು. ಅದೇ ರೀತಿಯಲ್ಲಿ ಪದವಿ ವಿದ್ಯಾರ್ಥಿಗಳಿಗೆ ಕ್ರೆಡಿಟ್ ಬೆಸ್ ಕೋರ್ಸ್ ಮೂಲಕ ತರಬೇತಿ ನೀಡಬೇಕು ಇದಕ್ಕೆ ಬೇಕಾದ ಅನುದಾನವನ್ನು ನೀಡಲಾಗುವುದು ಎಂದು ನವಾಜ್ ಮಾಹಿತಿ ನೀಡಿದರು.
ಪರಿಣಾಮಕಾರಿ ಅನುಷ್ಠಾನಕ್ಕೆ ಶ್ರಮಿಸಿ:
ಯೋಜನೆಗಳ ಅನುಷ್ಠಾನಕ್ಕೆ ಸಭೆಗಳನ್ನು ಹೆಚ್ಚಿನ ಮಟ್ಟದಲ್ಲಿ ಆಯೋಜನೆ ಮಾಡಬೇಕು. ವಿವಿಧ ಇಲಾಖೆಯ ಉಪ ಸಮಿತಿಗಳನ್ನು ರಚಿಸಿ ಪರಿಣಾಮಕಾರಿ ಅನುಷ್ಠಾನಕ್ಕೆ ಅಧಿಕಾರಿಗಳು ನಿರಂತರ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸಬೇಕು. ಸ್ಥಳೀಯ ತರಬೇತುದಾರರು, ಸಂಪನ್ಮೂಲ ವ್ಯಕ್ತಿಗಳು, ಎನ್.ಜಿ. ಓ ಸಂಸ್ಥೆಗಳು ಬಳಕೆ ಮಾಡಿಕೊಂಡು ಅನುಷ್ಠಾನ ಕ್ರಮವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಹುಲ್ ಶಿಂಧೆ ತಿಳಿಸಿದರು.
ವೇಗಾ ಹೆಲ್ಮೆಟ್ ಕಂಪನಿಯ ಪ್ರತಿನಿಧಿಯೊಬ್ಬರು ಮಾತನಾಡಿ ಕಾರ್ಪೆಂಟರ್ ಗಳು ಸಿಗುವುದು ತುಂಬಾ ಕಷ್ಟ ಹಾಗಾಗಿ ಅಂತಹ ವೃತ್ತಿಪರ ತರಬೇತಿಗಳನ್ನು ಆಯೋಜಿಸುವುದು ಉತ್ತಮ. ಪ್ರತಿ ವರ್ಷ ವಿವಿಧ ಕೆಲಸಗಳಿಗೆ ಬಹಳಷ್ಟು ಉದ್ಯೋಗಿಗಳ ಬೇಡಿಕೆಯಿದೆ ಅದಕ್ಕೆ ಅನುಗುಣವಾಗಿ ಅಂತಹ ತರಬೇತಿಗಳನ್ನು ಆಯೋಜಿಸಬೇಕು ಎಂದು ತಿಳಿಸಿದರು.
ಪ್ರೊಬೇಷನರಿ ಐಎಎಸ್ ಅಧಿಕಾರಿ ದಿನೇಶಕುಮಾರ್ ಮೀನಾ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ ಕಲಾದಗಿ, ಜಿಲ್ಲಾ ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಸತ್ಯನಾರಾಯಣ ಭಟ್, ಲೀಡ್ ಬ್ಯಾಂಕ್ ಮ್ಯಾನೇಜರ್ ಸುರೇಶ್ ಪೈ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ರವಿ ಬಂಗಾರಪ್ಪನವರ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಾಮನಗೌಡ ಕನ್ನೊಳ್ಳಿ, ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಅಬ್ದುಲ್ ರಶೀದ್ ಮಿರಜನ್ನವರ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಸವರಾಜ ಕುರಿಹುಲಿ,
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಆರ್. ನಾಗರಾಜ, ತೋಟಗಾರಿಕೆ ಉಪ ನಿರ್ದೇಶಕ ಮಹಾಂತೇಶ ಮುರಗೋಡ, ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ವ್ಯವಸ್ಥಾಪಕ ಡಾ. ಸಂಜೀವ ತಿಗಣಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು…
ವರದಿ. ಮಹಾಲಿಂಗ ಗಗ್ಗರಿ, ಬೆಳಗಾವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030