ರಾಜ್ಯೋತ್ಸವಕ್ಕೆ ಬಂತು ಹೊಸ ರೂಲ್ಸ್.. ಕನ್ನಡ ಕಲಿಯಲ್ಲ ಅನ್ನೋರಿಗೆ ಉರಿಯೋದು ಗ್ಯಾರಂಟಿ!
ಕನ್ನಡಿಗರ ಹಬ್ಬ ರಾಜ್ಯೋತ್ಸವಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಪ್ರತಿ ನವೆಂಬರ್ ಒಂದರಂದು ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸುವ ಜೊತೆಗೆ ತಿಂಗಳಿಡೀ ಹಬ್ಬದ ರೀತಿಯಲ್ಲೇ ಸಂಭ್ರಮಿಸಲಾಗುತ್ತದೆ. ಆದರೆ, ಈ ಬಾರಿ ರಾಜ್ಯ ಸರ್ಕಾರವು ಕನ್ನಡ ರಾಜ್ಯೋತ್ಸವಕ್ಕೆ ಹೊಸ ನಿಯಮವನ್ನು ಕಡ್ಡಾಯಗೊಳಿಸಿದೆ.
ಹೌದು, ಈ ಬಾರಿ ಕನ್ನಡ ರಾಜ್ಯೋತ್ಸವವನ್ನು ಎಲ್ಲೆಡೆಯೂ ಆಚರಿಸಬೇಕು ಎಂಬ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಖಡಕ್ ಸೂಚನೆ ನೀಡಿದೆ. ಹಾಗಾಗಿ ನವೆಂಬರ್ 1ರಂದು ಎಲ್ಲ ಶಾಲಾ, ಕಾಲೇಜುಗಳು, ಕಾರ್ಖಾನೆಗಳು ಮತ್ತು ಐಟಿಬಿಟಿ ಕಂಪನಿಗಳಲ್ಲಿ ಕನ್ನಡ ಬಾವುಟವನ್ನು ಕಡ್ಡಾಯವಾಗಿ ಹಾರಿಸಲೇಬೇಕು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಅವರು, ನವೆಂಬರ್ 1 ಎಂದರೆ ನಮ್ಮ ಕರ್ನಾಟಕಕ್ಕೆ ಬಹಳ ಹೆಮ್ಮೆಯ ದಿನ. ಅಂದು ನಮ್ಮ ನೆಲದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುವ ದಿನ. ಹಾಗಾಗಿ ಎಲ್ಲ ಕಂಪನಿಗಳು ಹಾಗೂ ಶಿಕ್ಷಣ ಸಂಸ್ಥೆಗಳು ಕನ್ನಡದ ಧ್ವಜಾರೋಹಣ ಮಾಡಬೇಕು. ಈ ಬಗ್ಗೆ ಆದೇಶ ಕೂಡ ಹೊರಡಿಸಲಾಗುವುದು ಎಂದಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಶೇ 50ರಷ್ಟು ಮಂದಿ ಹೊರಗಿನವರೇ ಇದ್ದಾರೆ. ಅವರು ಕೂಡ ನಮ್ಮ ಕನ್ನಡವನ್ನು ಕಲಿತುಕೊಳ್ಳಬೇಕು. ಆ ದಿನ ಕನ್ನಡಕ್ಕೆ ಸಂಬಂಧಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ಆಯೋಜಿಸಬೇಕು. ನಮ್ಮ ರಾಷ್ಟ್ರಧ್ವಜದ ರೀತಿಯಲ್ಲೇ ಕನ್ನಡದ ಬಾವುಟಕ್ಕೂ ಗೌರವ ಕೊಡಬೇಕು. ಈ ಮೂಲಕ ಕನ್ನಡಕ್ಕೆ ಶ್ರದ್ಧೆ ಹಾಗೂ ಗೌರವವನ್ನು ತೋರಬೇಕು ಎಂದು ಡಿ.ಕೆ.ಶಿವಕುಮಾರ್ ತಾಕೀತು ಮಾಡಿದ್ದಾರೆ.
ರಾಜ್ಯಕ್ಕೆ ಜನ ಎಲ್ಲಿಂದಾದರೂ ಬಂದಿರಲಿ, ಈ ನವೆಂಬರ್ 1 ರಂದು ಕರ್ನಾಟಕದ ಹೆಮ್ಮೆಯ ಧ್ವಜವನ್ನು ಕಡ್ಡಾಯವಾಗಿ ಹಾರಿಸಲೇಬೇಕು. ನಮಗೆ ಕನ್ನಡ ದಿನಾಚರಣೆ ಮುಖ್ಯವಾದದ್ದು. ಆ ದಿನ ಎಲ್ಲಾ ಸಂಸ್ಥೆಗಳಲ್ಲಿ, ಖಾಸಗಿ ಕಂಪನಿಗಳು ಈ ನೆಲದ ಕನ್ನಡ ಧ್ವಜವನ್ನು ಹಾರಿಸುವುದು ಕಡ್ಡಾಯ ಎಂದಿದ್ದಾರೆ.
ಕನ್ನಡ ಸಂಘಟನೆಗಳಿಗೆ ವಾರ್ನಿಂಗ್: ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಕನ್ನಡ ರಾಜ್ಯೋತ್ಸವವನ್ನು ಬಹಳ ಅದ್ಧೂರಿಯಾಗಿ ಆಚರಿಸುತ್ತಾರೆ. ಆದರೆ, ಕನ್ನಡ ರಾಜ್ಯೋತ್ಸವದ ಹೆಸರಿನಲ್ಲಿ ಯಾವ ಸಂಘಟನೆಗಳು ಕೂಡ ಯಾರ ಮೇಲೂ ಒತ್ತಡ ಹೇರಬಾರದು. ಆಚರಣೆ ಬಗ್ಗೆ ರಾಜ್ಯ ಸರ್ಕಾರವೇ ಆದೇಶ ನೀಡುತ್ತಿದೆ. ಅದರ ಅನ್ವಯವೇ ರಾಜ್ಯೋತ್ಸವ ಆಚರಿಸಲಿದ್ದಾರೆ.
ಬೆಂಗಳೂರಿನಲ್ಲಿ ಎಲ್ಲರೂ ರಾಜೋತ್ಸವ ಆಚರಣೆ ಮಾಡುತ್ತಾರೆ. ರಾಜ್ಯೋತ್ಸವ ಆಚರಣೆಗೆ ಯಾವ ಕನ್ನಡ ಸಂಘಟನೆಗಳು ಕೂಡ ಒತ್ತಡ ಹೇರಬಾರದು. ಸರ್ಕಾರವೇ ಆದೇಶಿಸಿದೆ. ಅದರಂತೆ ರಾಜೋತ್ಸವ ಆಚರಣೆ ಮಾಡುತ್ತಾರೆ. ಒಂದು ನಿಯಮವನ್ನು ಪಾಲನೆ ಮಾಡದಿದ್ದರೆ, ಅಂತಹ ವ್ಯಕ್ತಿಗಳು ಹಾಗೂ ಸಂಸ್ಥೆಗಳ ವಿರುದ್ಧ ಏನು ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ಸರ್ಕಾರವೇ ನಿರ್ಧರಿಸಲಿದೆ. ಈ ವಿಚಾರವಾಗಿ ಕನ್ನಡ ಸಂಘಟನೆಗಳು ಖಾಸಗಿ ಸಂಸ್ಥೆಗಳಿಗೆ ಧಮ್ಕಿ ಹಾಕುವುದು, ಗಲಾಟೆ ಮಾಡಿ ಹೆದರಿಸುವ ಕೆಲಸಗಳನ್ನು ಮಾಡಬಾರದು ಎಂದು ಮನವಿ ಮಾಡಿದ್ದಾರೆ…
ವರದಿ. ಮಹಾಲಿಂಗ ಗಗ್ಗರಿ, ಬೆಳಗಾವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030