ವಿಶ್ವ ಪ್ರವಾಸೋದ್ಯಮ ದಿನಾಚರಣೆ -2024
ಭವಿಷ್ಯದಲ್ಲಿ ಸ್ಥಳೀಯ ಪ್ರವಾಸೋದ್ಯಮ ಇನ್ನಷ್ಟು ಅಭಿವೃದ್ಧಿ: ಶಾಸಕ ಆಸೀಫ್ (ರಾಜು) ಸೇಠ್
ಬೆಳಗಾವಿ, : “ಪ್ರವಾಸೋದ್ಯಮ ದೇಶದ ಆರ್ಥಿಕತೆಯ ಪ್ರಮುಖ ಭಾಗವಾಗಿದೆ. ಅನೇಕ ದೇಶಗಳ ಆರ್ಥಿಕತೆಯು ಪ್ರವಾಸೋದ್ಯಮವನ್ನು ಮಾತ್ರ ಅವಲಂಬಿಸಿದೆ. ಪ್ರವಾಸೋದ್ಯಮವು ನಿಧಾನವಾಗಿ ಬದಲಾಗುತ್ತಿದ್ದು, ಇತ್ತೀಚೆಗೆ ಜನರು ಸ್ಥಳೀಯ ಪ್ರವಾಸಿ ತಾಣಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಈ ಬೆಳವಣಿಗೆಯಿಂದ ಭವಿಷ್ಯದಲ್ಲಿ ಪ್ರವಾಸೋದ್ಯಮ ಇನ್ನಷ್ಟು ಅಬಿವೃದ್ಧಿ ಹೊಂದಲಿದೆ” ಎಂದು ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ ಅವರು ತಿಳಿಸಿದರು.
ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಬೆಳಗಾವಿ ಕ್ಲಬ್ ಆವರಣದಲ್ಲಿ ಶುಕ್ರವಾರ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆ -2024 ರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರವಾಸಿಗರು ವೈವಿಧ್ಯಮಯ ಪ್ರವಾಸಿ ತಾಣಗಳನ್ನು ವೀಕ್ಷಿಸಲು, ಅನ್ವೇಷಿಸಲು ಬರುತ್ತಾರೆ. ಬೆಳಗಾವಿ ಜಿಲ್ಲೆಯಲ್ಲಿ ಕೋಟೆಗಳು, ಕೆರೆಗಳು, ಜಲಪಾತ ವಿವಿಧ ದೇವಸ್ಥಾನ ಸೇರಿದಂತೆ ಸಾಕಷ್ಟು ಪ್ರವಾಸಿ ತಾಣಗಳಿವೆ. ಉದ್ಯೋಗ ಸೃಜನೆ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಚಾಲನಾ ಶಕ್ತಿಯಾಗಿ ಪ್ರವಾಸೋದ್ಯಮವು ಹೆಜ್ಜೆ ಗುರುತು ಮೂಡಿಸಿದೆ ಎಂದು ಹೇಳಿದರು.
ಬೆಳಗಾವಿ ಜಿಲ್ಲೆಯ ವಿವಿಧ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವ ದೇಶಿಯ ಹಾಗೂ ವಿದೇಶಿಯ ಪ್ರವಾಸಿಗರಿಗೆ ಸೂಕ್ತ ಸುರಕ್ಷತೆ ಮತ್ತು ಭದ್ರತೆಯನ್ನು ಕಲ್ಪಿಸುವ ಮೂಲಕ ಜಿಲ್ಲೆಯಲ್ಲಿ ಸುರಕ್ಷಿತ ಹಾಗೂ ಶಾಂತಿಯುತ ವಾತಾವರಣವನ್ನು ಸೃಷ್ಟಿ ಮಾಡಬೇಕು ಎಂದು ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ ಅವರು ಸಲಹೆ ನೀಡಿದರು.
ಪ್ರವಾಸಿ ತಾಣಗಳ ಸ್ವಚ್ಚತೆಗೆ ಆದ್ಯತೆ ನೀಡಿ:
ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ವಿಭಿನ್ನ, ವೈವಿದ್ಯಮಯ ಪ್ರವಾಸಿ ತಾಣಗಳಿವೆ. ಬೆಟ್ಟ, ಜಲಪಾತ, ದೇವಸ್ಥಾನಗಳು, ಐತಿಹಾಸಿಕ ಸ್ಥಳಗಳು, ಕೋಟೆಗಳು, ಸಮುದ್ರ ಸೇರಿದಂತೆ ಸಾಕಷ್ಟು ಪ್ರವಾಸಿ ತಾಣಗಳಿವೆ. ಒಂದು ರಾಜ್ಯ ಹಲವು ಜಗತ್ತು ಎಂಬ ಬರಹ ಕರ್ನಾಟಕ ಪ್ರವಾಸೋದ್ಯಮಕ್ಕೆ ಸರಿಯಾಗಿ ಹೊಂದಾಣಿಕೆಯಾಗಿದೆ ಎಂದರು.
ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕು. ಯುವಕರು ಭೇಟಿ ನೀಡಿದ ಪ್ರವಾಸಿ ತಾಣಗಳಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಭವಿಷ್ಯದಲ್ಲಿ ಪ್ರವಾಸಿ ತಾಣಗಳ ಉಳಿವಿಗೆ, ಅಭಿವೃದ್ಧಿಗೆ ಪ್ರತಿಯೊಬ್ಬರೂ ಸ್ವಚ್ಚತೆ ಕಾಪಾಡಿಕೊಂಡು ಸಹಕಾರ ನೀಡಬೇಕು ಎಂದು ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಯುವಕರಿಗೆ ತಿಳಿಹೇಳಿದರು.
ದೇಶದ ಪ್ರಗತಿಗೆ ಪ್ರವಾಸೋದ್ಯಮ ಪಾತ್ರ ದೊಡ್ಡದು:
ಇದೇ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಅವರು ಮಾತನಾಡಿ, ದೇಶದ ಪ್ರಗತಿಗೆ ಪ್ರವಾಸೋದ್ಯಮ ಪಾತ್ರ ತುಂಬಾ ಮುಖ್ಯವಾದದ್ದು, ಪ್ರವಾಸೋದ್ಯಮದಿಂದ ಅಲ್ಲಿನ ಪ್ರದೇಶದ ಜನರಿಗೆ ಬದುಕು ಕಟ್ಟಿಕೊಡಲು ನೆರವಾಗಲಿದೆ. ನೆರೆಯ ರಾಜ್ಯ ಗೋವಾದಲ್ಲಿ ಪ್ರವಾಸೋದ್ಯಮವು ರಾಜ್ಯದ ಆದಾಯದ ಮೂಲವಾಗಿದೆ ಎಂದರು.
ಬೆಳಗಾವಿಯಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ಪ್ರವಾಸೋದ್ಯಮವು ವಿಭಿನ್ನ ಸಂಸ್ಕೃತಿ ಮತ್ತು ಸ್ಥಳಗಳನ್ನು ಸಂಪರ್ಕಿಸುತ್ತದೆ. ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮ ಹೊಸ ಆಯಾಮ ಪಡೆಯಲಿದೆ ಎಂದು ಎಸ್.ಪಿ ಡಾ. ಭೀಮಾಶಂಕರ ಗುಳೇದ ಅವರು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರವಾಸೋದ್ಯಮ ಇಲಾಖೆ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕಿ ಸೌಮ್ಯ ಬಾಪಟ ಅವರು, ವಿಶ್ವ ಪ್ರವಾಸೋದ್ಯಮ ದಿನಾಚರಣೆ ಪ್ರತಿ ವರ್ಷ ಸೆಪ್ಟೆಂಬರ್ 27 ರಂದು ಆಚರಿಸಲು ನಿರ್ಧರಿಸಲಾಗಿದೆ. ಕರ್ನಾಟಕ ಪ್ರವಾಸೋದ್ಯಮವು ಪ್ರಪಂಚದ ಹಲವು ಸಂಸ್ಕೃತಿ ಮತ್ತು ಪರಂಪರೆಗಳ ಸ್ಫೂರ್ಥಿಯ ರಂಗಸ್ಥಳವಾಗಿದೆ. “ಒಂದು ರಾಜ್ಯ, ಹಲವು ಜಗತ್ತುಗಳು” ಎಂಬ ಬರಹಕ್ಕೆ ಕರ್ನಾಟಕ ಪ್ರವಾಸೋದ್ಯಮ ಪಾತ್ರವಾಗಿದೆ ಎಂದು ಹೇಳಿದರು.
ವಸ್ತು ಪ್ರದರ್ಶನ; ವಿಶೇಷ ತಿಂಡಿ ತಿನಿಸುಗಳ ಮಳಿಗೆಗಳ ಉದ್ಘಾಟನೆ:
ಇದೇ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಏರ್ಪಡಿಸಲಾದ ಬೆಳಗಾವಿ ಜಿಲ್ಲೆಯ ಪ್ರವಾಸಿ ತಾಣಗಳನ್ನು ಸೆರೆ ಹಿಡಿದ ಛಾಯಾಗ್ರಹಣ, ವಿಡಿಯೋ ಲೋಗೋಗಳ ವಿನ್ಯಾಸ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಮಾಣಪತ್ರ ಹಾಗೂ ಬಹುಮಾನ ವಿತರಿಸಲಾಯಿತು. ಬಳಿಕ ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ ಅವರು ಜಿಲ್ಲೆಯಲ್ಲಿ ತಯಾರಾಗುವ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ವಿಶೇಷ ತಿಂಡಿ ತಿನಿಸುಗಳ ಮಳಿಗೆಗಳನ್ನು ಉದ್ಘಾಟಿಸಿದರು.
ಅಂಚೆ ರದ್ದತಿ ಬಿಡುಗಡೆ:
ಇದಕ್ಕೂ ಮುಂಚೆ ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ರಾಜು ಆಸೀಫ್ ಸೇಠ, ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ, ಬೆಳಗಾವಿ ವಿಭಾಗದ ಅಂಚೆ ಅಧೀಕ್ಷಕ ವಿಜಯ ವಾಡೋಣಿ, ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಸೌಮ್ಯ ಬಾಪಟ ಅವರು ವಿಶ್ವ ಪ್ರವಾಸೋದ್ಯಮ ದಿನಾಚರಣೆ -2024ರ ಅಂಗವಾಗಿ ಭಾರತೀಯ ಅಂಚೆ ಇಲಾಖೆ ಬೆಳಗಾವಿ ವಿಭಾಗದಿಂದ ಸುವರ್ಣ ವಿಧಾನ ಸೌಧದ ಚಿತ್ರವಿರುವ ವಿಶೇಷ ಅಂಚೆ ರದ್ದತಿ ಬಿಡುಗಡೆ ಮಾಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಹುಲ್ ಶಿಂಧೆ, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಬಸವರಾಜ ಕುರಿಹುಲಿ, ಬೆಳಗಾವಿ ವಿಭಾಗದ ಅಂಚೆ ಅಧೀಕ್ಷಕ ವಿಜಯ ವಾಡೋಣಿ ಉಪಸ್ಥಿತರಿದ್ದರು. ಪ್ರವಾಸೋದ್ಯಮ ಇಲಾಖೆ ಸಿಬ್ಬಂದಿಗಳು, ಭಾರತೀಯ ಅಂಚೆ ಇಲಾಖೆ ಸಿಬ್ಬಂದಿಗಳು, ವಿವಿಧ ಹೋಟೆಲ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಜಾಥಾ ಕಾರ್ಯಕ್ರಮ:
ವೇದಿಕೆ ಕಾರ್ಯಕ್ರಮಕ್ಕೂ ಮುಂಚೆ ವಿಶ್ವ ಪ್ರವಾಸೋದ್ಯಮ ದಿನಾಚರಣೆ-2024ರ ಅಂಗವಾಗಿ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಚನ್ನಮ್ಮ ವೃತ್ತದವರೆಗೆ ಪ್ರವಾಸಿ ಜಾಥಾ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕಿ ಸೌಮ್ಯ ಬಾಪಟ, ಉಪ ನಿರ್ದೇಶಕ ಬಸವರಾಜ ಕುರಿಹುಲಿ ಹಾಜರಿದ್ದರು.
ವಿವಿಧ ಸಂಘ, ಸಂಸ್ಥೆಯವರು, ಹೋಟೆಲ್ ಅಸೋಸಿಯೇಷನ್ಸ್, ಟೂರ್ ಮತ್ತು ಟ್ರಾವೆಲ್ಸ್ ಸಂಸ್ಥೆಯ ಪ್ರತಿನಿಧಿಗಳು, ಹೋಟೆಲ್ ಮ್ಯಾನೇಜಮೆಂಟ್ ವಿದ್ಯಾರ್ಥಿಗಳು ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದರು…
ವರದಿ. ಮಹಾಲಿಂಗ ಗಗ್ಗರಿ, ಬೆಳಗಾವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030