ಯುವಜನರ ಜಾಗೃತಿಯಿಂದ ವ್ಯಸನಮುಕ್ತ ಸಮಾಜ ನಿರ್ಮಾಣ ಸಾಧ್ಯ: ಕೆ ಎ ದಯಾನಂದ
ದೇಶದ ಭವಿಷ್ಯವನ್ನು ನಿರ್ಧರಿಸುವ ಯುವಜನರ ಜಾಗೃತಿಯಿಂದಲೇ ವ್ಯಸನಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಕೆ ಎ ದಯಾನಂದ ಅವರು ಅಭಿಪ್ರಾಯ ಪಟ್ಟರು.
ಅವರು ಇಂದು ಡಾ. ಮಹಾಂತ ಶಿವಯೋಗಿ ಸ್ವಾಮಿ ಅವರ ಜನ್ಮದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವ್ಯಸನಮುಕ್ತ ದಿನಾಚರಣೆಯ ಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿದರು.
ಸುಮಾರು 200ಕ್ಕೂ ಹೆಚ್ಚು ಶಾಲಾ ಮತ್ತು ಕಾಲೇಜು ವಿದ್ಯಾರ್ಥಿ- ವಿದ್ಯಾರ್ಥಿನಿಯರು ವ್ಯಸನಮುಕ್ತ ಘೋಷವಾಕ್ಯಗಳ ಪ್ಲಕಾರ್ಡ್ ಹಿಡಿದು ನಗರದ ಕೆ.ಆರ್ ವೃತ್ತದಿಂದ ಆರಂಭಿಸಿ, ನೃಪತುಂಗ ರಸ್ತೆಯಲ್ಲಿ ಹಾದು ಹಡ್ಸನ್ ವೃತ್ತ ಮಾರ್ಗವಾಗಿ ಕೆ.ಜಿ ರಸ್ತೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಜಾಥಾ ನಡಿಗೆಯಲ್ಲಿ ಪಾಲ್ಗೊಂಡು ಅರಿವು ಮೂಡಿಸಿದರು. ವಾದ್ಯಗಳೊಂದಿಗೆ ಬಹುಜನ ಕ್ರಿಯೇಷನ್ಸ್ ತಂಡದ ಕಲಾವಿದರು ಜಾಥದುದ್ದಕ್ಕೂ ವ್ಯಸನ ಸಂಬಂಧಿತ ಗೀತೆಗಳನ್ನು ಹಾಡಿ ಜಾಗೃತಿ ಮೂಡಿಸಿದರು.
ಜಾಥಾ ನಂತರ ಜಿಲ್ಲಾಧಿಕಾರಿಗಳ ಕಚೇರಿ ಅವರಣದಲ್ಲಿ ಕುಡಿತದ ದುಷ್ಪರಿಣಾಮಗಳ ಬಗ್ಗೆ ಕಲಾ ತಂಡ ಪ್ರಸ್ತುತ ಪಡಿಸಿದ ಬೀದಿನಾಟಕ ಸುತ್ತಮುತ್ತ ನೂರಾರು ಜನರ ಗಮನ ಸೆಳೆಯಿತು. ನಂತರ ಕರ್ನಾಟಕ ರಾಜ್ಯ ಕಂದಾಯ ನೌಕರರ ಸಂಘ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಡಾ ಮಾಹಾಂತ ಶಿವಯೋಗಿ ಸ್ವಾಮಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅಪರ ಜಿಲ್ಲಾಧಿಕಾರಿಗಳಾದ ಟಿ ಎನ್ ಕೃಷ್ಣ ಮೂರ್ತಿ ಅವರು ತಮ್ಮ ಸಹಪಾಟಿಗಳ ಒತ್ತಡಕ್ಕೆ ಮಣಿದು ಯಾವುದೇ ದುರ್ವ್ಯಸನಗಳಿಗೆ ಒಳಗಾಗಬೇಡಿ ಎಂದು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.
ಇತ್ತೀಚಿಗೆ ಯುವತಿಯರು ಲಿಂಗ ಸಮಾನತೆ ಸಾಧಿಸುವ ದೃಷ್ಟಿಯಿಂದ ಮಧ್ಯ ಮತ್ತು ಧೂಮಪಾನ ಸೇರಿದಂತೆ ಅನೇಕ ವ್ಯಸನಗಳಿಗೆ ಒಳಗಾಗುತ್ತಿರುವುದು ಭವಿಷ್ಯದಲ್ಲಿ ದೇಶದ ಸ್ವಾಸ್ಥ್ಯದ ಕುರಿತು ಆತಂಕವನ್ನು ಸೃಷ್ಠಿಸಿದೆ. ದುಷ್ಚಟಗಳಲ್ಲಿ ಸಮಾನತೆ ಕಾಣುವುದನ್ನು ತೊರೆದು ದೇಶದ ಭವಿಷ್ಯ ರೂಪಿಸಲು ಉತ್ತಮ ಸಾಧನೆ ಮಾಡುವಲ್ಲಿ ಯುವತಿಯರು ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ವ್ಯಸನದಿಂದಾಗುವ ದುಷ್ಪರಿಣಾಮಗಳ ಹಾಗೂ ಅವುಗಳಿಂದ ಹೊರಬರುವ ಸಾಧನಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋವೈದ್ಯರಾದ ಡಾ. ಚೇತನ್ ಕುಮಾರ್ ಕೆ.ಎಸ್ ಅವರು ಯುವಕ-ಯುವತಿಯರು ಯಾವ ವಸ್ತು ಖುಷಿ ಕೊಡುತ್ತದೋ ಅಂತಹ ವಸ್ತುಗಳಿಗೆ ಹೆಚ್ಚು ಆಕರ್ಷಿತರಾಗುತ್ತಾರೆ. ಮಾದಕ ವ್ಯಸನವು ಈ ರೀತಿಯ ತಾತ್ಕಾಲಿಕ ಉನ್ಮಾದ ಅಥವಾ ಖುಷಿಯನ್ನು ನೀಡುವುದರಿಂದ ಯುವಜನರು ಅವುಗಳ ದಾಸ್ಯಕ್ಕೆ ಸುಲಭವಾಗಿ ಸಿಲುಕುತ್ತಾರೆ ಎಂದರು.
ಅಂಕಿ ಅಂಶಗಳ ಪ್ರಕಾರ, ಭಾರತ ದೇಶದಲ್ಲಿ ಮಾದಕ ವಸ್ತುಗಳ ಬಳಕೆ ಪ್ರಾರಂಭವಾಗುವುದು 14 ರಿಂದ 16 ವರ್ಷದ ಮಕ್ಕಳಲ್ಲಿ ಅತೀ ಹೆಚ್ಚು ಎಂದ ಆವರು, ಈ ಅವಧಿಯಲ್ಲಿ ಮಕ್ಕಳ ಮೆದುಳು ಇನ್ನೂ ಪೂರ್ಣಪ್ರಮಾಣದಲ್ಲಿ ವೃದ್ಧಿಯಾಗಿರುವುದಿಲ್ಲ ಎಂದರು. ಅದರಿಂದಾಗಿ ಅವರು ತಮ್ಮ ಮನಸ್ಸಿನ ಮೇಲಿನ ಹಿಡಿತವನ್ನು ಕಳೆದುಕೊಂಡು ದೈಹಿಕವಾಗಿ ಮತ್ತು ಮಾನಸಿಕವಾಗಿ ಅಸ್ವಸ್ಥರಾಗುತ್ತಿದ್ದಾರೆ ಎಂದರು.
ಆದರೆ, ಅಂತಹ ಸಂದರ್ಭಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವುದು ಅಥವಾ ಖಿನ್ನತೆಗೆ ಒಳಗಾಗಿ, ಆತ್ಮವಿಶ್ವಾಸವನ್ನು ಕಳೆದುಕೊಳ್ಳುವ ಬದಲು ತಜ್ಞರ ಸಹಾಯವನ್ನು ಪಡೆಯಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತಿ ಮಂಗಳವಾರ ನಡೆಸಲಾಗುವ ಮನೋಚೇತನ್ಯ ಶಿಬಿರದಲ್ಲಿ ಮಾನಸಿಕ ಅಸ್ವಸ್ಥರೂ ಸೇರಿದಂತೆ ವ್ಯಸನಿಗಳಿಗೆ ಉಚಿತ ತಪಾಸಣೆ ಮತ್ತು ಆಪ್ತ ಸಮಾಲೋಚನೆ ನೀಡಲಾಘುತ್ತಿದೆ.
ತಮ್ಮ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಈ ಸೌಲಭ್ಯವನ್ನು ಪಡೆದುಕೊಳ್ಳಲು ವ್ಯಸನ ಪೀಡಿತರು ಹಾಗೂ ಅವರ ಕುಟುಂಬದವರು ಮುಂದಾಗಬೇಕು ಎಂದು ಕರೆ ಕೊಟ್ಟರು. ಜೊತೆಗೆ ಟೆಲಿಮನಸ್ ಸಹಾಯವಾಣಿ ಕೂಡ ಕಾರ್ಯ ನಿರ್ವಹಿಸುತ್ತಿದ್ದು, 14416 ಉಚಿತ ದೂರವಾಣಿ ಮೂಲಕವೂ ಸಂಪರ್ಕಿಸಿ ಆಪ್ತ ಸಮಾಲೋಚನೆ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಾಳ್ಗೊಂಡಿದ್ದ ದೊಡ್ಡಬೆಳಮಂಗಲ ಪೊಲೀಸ್ ಠಾಣಾ ನಿರೀಕ್ಷಕರಾದ ನವೀನ್ ಕುಮಾರ್ ಎಂ ಬಿ ಅವರು ಮಾತನಾಡಿ ವ್ಯಸನಕ್ಕೆ ಒಳಗಾದ ಯುವಕರು ನೈಸರ್ಗಿಕ ವಾದ ಆಹಾರ, ನಿತ್ಯ ಯೋಗ, ಧ್ಯಾನ ಮಡುವುದರಿಂದ ಉತ್ತಮ ಜೀವನ ಕಟ್ಟಿಕೊಳ್ಳಬಹುದು ಎಂದು ಅಭಿಪ್ರಾಯ ಪಟ್ಟರು. ಕುಡಿತ ದೇಹ ಮತ್ತು ಮನಸ್ಸು ಎರಡನ್ನೂ ಹಾಳು ಮಾಡುತ್ತದೆ. ಇಂತಹ ದುಶ್ವಟದಿಂದ ಹೊರಬರಲು ಸಾಮಾಜದಲ್ಲಿ ಎದುರಾಗುವ ಸಾವಲುಗಳನ್ನು ಎದುರಿಸಲು ಕುಟುಂಬದ ಬೆಂಬಲ, ಮನ ಪರಿವರ್ತನಾ ಕೇಂದ್ರಗಳ ನೆರವು ಅಗತ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕರಾದ ಪಲ್ಲವಿ ಹೊನ್ನಾಪುರ ಅವರು ರಾಜ್ಯದಲ್ಲಿ ಸಾವಿರಾರು ಕುಟುಂಬಗಳನ್ನು ವ್ಯಸನದ ಸಂಕಷ್ಟಗಳಿಂದ ಬಿಡುಗಡೆಗೊಳಿಸಿದ ಡಾ. ಮಹಾಂತ ಶಿವಯೋಗಿ ಸ್ವಾಮಿಗಳ ಕೊಡುಗೆ ಕುರಿತು ಪರಿಚಯಿಸಿದರು. ಅರಿವೆಯ ಜೋಳಿಗೆಯಲ್ಲಿ ಜನರ ಮನೆ ಮೆನೆಗೆ ಹೋಗಿ ಅವರ ದುಷ್ಚಟಗಳನ್ನು ಬಿಕ್ಷೆಯಾಗಿ ಪಡೆದು ವ್ಯಸನಗಳನ್ನು ತೊರೆಯುವಂತೆ ಮನಃಪರಿವರ್ತನೆ ಮಾಡಿದವರು ಮಹಾಂತ ಶಿವಯೋಗಿಗಳು ಎಂದು ತಿಳಿಸಿದರು. ವಾರ್ತಾ ಇಲಾಖೆಯು ರಾಜ್ಯಾದ್ಯಂತ ಪ್ರತಿ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಇಂದು ಏಕ ಕಾಲಕ್ಕೆ ವ್ಯಸನಮುಕ್ತ ದಿನಾಚರಣೆಯನ್ನು ಜಿಲ್ಲಾಡಳಿತದೊಂದಿಗೆ ಆಚರಿಸುತ್ತಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ವ್ಯಸನಮುಕ್ತ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು. ಅಲ್ಲದೇ ಕಾರ್ಯಕ್ರಮದ ನಂತರ ಆಯೋಜಿಸಿದ್ದ ವ್ಯಸನಮುಕ್ತ ಸಮಾಲೋಚನ ಶಿಬಿರದಲ್ಲಿಯೂ ವಿದ್ಯಾರ್ಥಿಗಳು ಭಾಗಿಯಾದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ರವೀಂದ್ರನಾಥ ಎಂ ಮೇಟಿ, ಜಿಲ್ಲಾ ಕುಷ್ಟರೋಗ ನಿಯಂತ್ರಣ ಹಾಗೂ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿಗಳಾದ ಡಾ. ನಾಗರಾಜ್, ಜಿಲ್ಲಾ ವಿಶೇಷ ಚೇತನರ ಇಲಾಖೆಯ ಜಿಲ್ಲಾ ಸಂಯೋಜಕರಾದ ಮಲ್ಲಿಕಾರ್ಜುನ್, ತೋಟಗಾರಿಕೆ ಇಲಾಖೆ ಸಹಾಯಕ ತೋಟಗಾರಿಕೆ ಅಧಿಕಾರಿಗಳಾದ ಅಲ್ತಾಫ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕರಾದ ಎನ್ ಸೌಮ್ಯ, ಇಲಾಖಾ ಸಿಬ್ಬಂದಿ ಸೇರಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು, ಆರ್ ಆರ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು..
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030