ಬಸವರಾಜ ಸಿಂದಗಿಮಠಗೆ ಪ್ರಶಂಸನಾ ಪ್ರಶಸ್ತಿ
ಬಾದಾಮಿ: ಬಾದಾಮಿ ತಾಲೂಕಾ ಆಡಳಿತ ವತಿಯಿಂದ ಸ್ಥಳೀಯ ಎಪಿಎಮ್‍ಸಿ ಆವರಣದಲ್ಲಿ ಗುರುವಾರ ನಡೆದ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಕೊಡ ಮಾಡುವ ಪ್ರಶಸ್ತಿಗೆ ತಾಲೂಕಿನ ಚಿಕ್ಕಮುಚ್ಚಳಗುಡ್ಡ ಗ್ರಾಮದ ಸರಕಾರಿ ಆದರ್ಶ ವಿದ್ಯಾಲಯದ ಸಂಗೀತ ಶಿಕ್ಷಕರಾದ ಬಸವರಾಜ ಚ. ಸಿಂದಗಿಮಠ ಅವರು ಸಂಗೀತ ಕ್ಷೇತ್ರದಲ್ಲಿ ಗೈದ ಸಾಧನೆಯನ್ನು ಗುರುತಿಸಿ ಅವರಿಗೆ ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಲಾಯಿತು.
ಬಸವರಾಜ ಸಿಂದಗಿಮಠ ಅವರು ಮೂಲತಃ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದವರಾಗಿದ್ದು, ಯುವಜನೋತ್ಸವ, ಆಳ್ವಾಸ್ ನುಡಿಸಿರಿ, ಚಾಲುಕ್ಯೋತ್ಸವ ಸೇರಿದಂತೆ ರಾಜ್ಯಮಟ್ಟದ ಕಾರ್ಯಕ್ರಮಗಳಲ್ಲಿ ಜಾನಪದ ಗೀತೆ, ಭಾವಗೀತೆ, ತತ್ವಪದ, ವಚನಗಾಯನ ಹೀಗೆ ತಮ್ಮ ಸಂಗೀತದ ರುಚಿ ಉಣಿಸಿದ್ದಾರೆ. ಅವರು ಸುಮಾರು 22 ವರ್ಷಗಳಿಂದ ವಿವಿದ ಉತ್ಸವಗಳಲ್ಲಿ ಜಾನಪದ ಸೊಗಡನ್ನು ರಾಜ್ಯದ ಉದ್ದಗಲಕ್ಕೂ ಪಸರಿಸಿದ್ದು, ಇವರ ಸಂಗೀತ ಸೇವೆಯನ್ನು ಗುರುತಿಸಿ ಪ್ರಶಂಸನಾ ಪತ್ರ ನೀಡಿ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕರಾದ ಭೀಮಸೇನ ಚಿಮ್ಮನಕಟ್ಟಿ, ತಹಸೀಲ್ದಾರ ಜೆ.ಬಿ.ಮಜ್ಜಗಿ, ತಾ.ಪಂ. ಪ್ರಭಾರ ಕಾರ್ಯನಿರ್ವಾಕಾಧಿಕಾರಿ ಮಲ್ಲಿಕಾರ್ಜುನ ಎಸ್.ಬಡಿಗೇರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಿವುಕುಮಾರ ಹಿರೇಮಠ, ಪುರಸಭೆ ಸದಸ್ಯ ಮಂಜು ಹೊಸಮನಿ, ಬಸವರಾಜ ತೀರ್ಥಪ್ಪನವರ ಮತ್ತಿತರರು ಇದ್ದರು…
ವರದಿ. ಸಚಿನ್ ಬಾಗಲಕೋಟ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030