ಬಳ್ಳಾರಿಯ ಗ್ರಾಮೀಣ ಮತ್ತು ನಗರ ಪ್ರದೇಶದ ನಿರುದ್ಯೋಗಿ ಯುವಕ-ಯುವತಿಯರಿಗೆ “ಚಾಲನಾ” ತರಬೇತಿ
ಬಳ್ಳಾರಿ:ಯುವಜನರನ್ನು ಮೌಲ್ಯಯುತವಾದ ಚಾಲನಾ ಕೌಶಲ್ಯದೊಂದಿಗೆ ಸಜ್ಜುಗೊಳಿಸಲು ಹಾಗೂ ಉದ್ಯೋಗಾವಕಾಶ ಹೊಂದಲು ವಾಹನ ಚಾಲನಾ ತರಬೇತಿಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಇವರ ಸಹಯೋಗದಲ್ಲಿ ಮೋಕಾ ಗ್ರಾಮದ ಮುದ್ದು ಮಲ್ಲೇಶ್ವರ ದೇವಸ್ಥಾನ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ಖನಿಜಾ ಪ್ರತಿಷ್ಠಾನ ಟ್ರಸ್ಟ್ ಅನುದಾನದಡಿ ಬಳ್ಳಾರಿಯ ಗ್ರಾಮೀಣ ಮತ್ತು ನಗರ ಪ್ರದೇಶದ ನಿರುದ್ಯೋಗಿ ಯುವಕ ಮತ್ತು ಯುವತಿಯರಿಗೆ ನೀಡಲು ಉದ್ದೇಶಿಸಲಾದ “ಚಾಲನಾ” ತರಬೇತಿ (ಎಲ್.ಎಂ.ವಿ) ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
20 ದಿನಗಳ ತರಬೇತಿ ಇದಾಗಿದ್ದು, ಮಹಿಳಾ ಅಭ್ಯರ್ಥಿಗಳು ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ)ನಲ್ಲಿ ಸ್ವಚ್ಛ ವಾಹಿನಿ ಚಾಲಕರ ಹುದ್ದೆ ಹಾಗೂ ಪುರುಷರು ಮೆಟ್ರೋ ನಗರಗಳಲ್ಲಿ ಉಬರ್ ಮತ್ತು ಓಲಾ ಕಂಪನಿಗಳಲ್ಲಿ ಉದ್ಯೋಗ ಪಡೆಯಬಹುದು. ಈ ಅವಕಾಶ ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಾಣೇಶ್ ಅವರು ಮಾತನಾಡಿ, ಮೋಕಾ, ಯರಗುಡಿ, ವಣೇನೂರು ಮತ್ತು ಬೈರದೇವನಹಳ್ಳಿ ಗ್ರಾಮ ಪಂಚಾಯಿತಿಗಳಿoದ ತಲಾ 20 ಅಭ್ಯರ್ಥಿಗಳಂತೆ 80 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ನಿಯಮಿತವಾಗಿ ತರಗತಿಗಳಿಗೆ ಹಾಜರಾಗಬೇಕು ಎಂದರು.
ಈ ವೇಳೆ ಮೋಕಾ, ಯರಗುಡಿ, ವಣೇನೂರು ಮತ್ತು ಬೈರದೇವನಹಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ವಾಹನ ಚಾಲನಾ ತರಬೇತಿ ಸಂಸ್ಥೆಯ ಸಿಬ್ಬಂದಿ ಹಾಗೂ ಮುಂತಾದವರು ಹಾಜರಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030