ಸರಳಾದೇವಿ ಕಾಲೇಜಿನಲ್ಲಿ ಆಯೋಡಿನ್‌ಯುಕ್ತ ಉಪ್ಪಿನ ಕುರಿತ ಜಾಗೃತಿ
ಅಯೋಡಿನ್ ಕೊರತೆಯ ನ್ಯೂನ್ಯತೆಗಳನ್ನು ತಡೆಗಟ್ಟಿರಿ: ಡಾ.ಮರಿಯಂಬಿ.ವಿ.ಕೆ.
ಬಳ್ಳಾರಿ, :ದಿನನಿತ್ಯ ಆಹಾರದಲ್ಲಿ ಅಯೋಡಿನ್‌ಯುಕ್ತ ಉಪ್ಪನ್ನೇ ಬಳಸುವ ಮೂಲಕ ಅಯೋಡಿನ್ ಕೊರತೆಯ ನ್ಯೂನ್ಯತೆಗಳನ್ನು ತಡೆಗಟ್ಟಿರಿ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಹಾಗೂ ಅಯೋಡಿನ್ ಕೊರತೆಯ ನ್ಯೂನ್ಯತೆಗಳ ನಿಯಂತ್ರಣದ ಕಾರ್ಯಕ್ರಮಾಧಿಕಾರಿ ಡಾ.ಮರಿಯಂಬಿ.ವಿ.ಕೆ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ ವತಿಯಿಂದ ‘ವಿಶ್ವ ಅಯೋಡಿನ್ ಕೊರತೆಯ ನ್ಯೂನ್ಯತೆಗಳ ನಿಯಂತ್ರಣ ದಿನ ಹಾಗೂ ಸಪ್ತಾಹ’ ಕಾರ್ಯಕ್ರಮದ ಅಂಗವಾಗಿ ನಗರದ ಸರಳಾದೇವಿ ಸತೀಶ್ಚಂದ್ರ ಅಗರ್‌ವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಆಯೋಡಿನ್‌ಯುಕ್ತ ಉಪ್ಪಿನ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ‘ಅಯೋಡಿನ್‌ಯುಕ್ತ ಉಪ್ಪಿನ ಕುರಿತಂತೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಅಯೋಡಿನ್ ಮನುಷ್ಯನಿಗೆ ಅತ್ಯಗತ್ಯವಾಗಿ ಬೇಕಾಗುವ ಒಂದು ಸೂಕ್ಷ್ಮ ಪೋಷಕಾಂಶವಾಗಿದೆ. ಇದು ಮಾನವನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಅತ್ಯವಶ್ಯಕವಾಗಿರುತ್ತದೆ ಎಂದು ತಿಳಿಸಿದರು.
ಥೈರಾಯಿಡ್ ಗ್ರಂಥಿಯು ನಮ್ಮ ದೇಹಕ್ಕೆ ಅವಶ್ಯಕವಿರುವ ಹಾರ್ಮೋನ್‌ಗಳನ್ನು ಉತ್ಪತ್ತಿ ಮಾಡಲು ಅಯೋಡಿನ್ ಅಂಶ ಅಗತ್ಯವಾಗಿದೆ. ನಾವುಗಳು ದಿನನಿತ್ಯ ಆಹಾರದಲ್ಲಿ ಅಯೋಡಿನ್‌ಯುಕ್ತ ಉಪ್ಪನ್ನೇ ಬಳಸಬೇಕು. ದಿನ ನಿತ್ಯ ಹಸಿರು ಸೊಪ್ಪು ಮತ್ತು ತರಕಾರಿಗಳನ್ನು ಬಳಸಬೇಕು. ತಾಜಾ ತರಕಾರಿಯೊಂದಿಗೆ ಅಯೋಡಿನ್‌ಯುಕ್ತ ಉಪ್ಪು ಬಳಕೆ ಮಾಡಬೇಕು. ಇದರಿಂದ ಅಯೋಡಿನ್ ಕೊರತೆಯಿಂದ ಉಂಟಾಗುವ ನ್ಯೂನ್ಯತೆಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದರು.
ಅಯೋಡಿನ್ ಕೊರತೆಯ ನ್ಯೂನ್ಯತೆಗಳ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಎಲ್ಲಾ ಆರೋಗ್ಯ ಕೇಂದ್ರಗಳ ಅಡಿಯಲ್ಲಿ ಪ್ರತಿ ತಿಂಗಳು ಪ್ರತಿ ಒಬ್ಬ ಆಶಾ ಕಾರ್ಯಕರ್ತರಿಂದ 50 ಮನೆಗಳ ಉಪ್ಪಿನ ಮಾದರಿಗಳನ್ನು ಪರೀಕ್ಷಿಸುವ ಮೂಲಕ ಉಪ್ಪಿನಲ್ಲಿ ಅಯೋಡಿನ್ ಅಂಶದ ಬಗ್ಗೆ ಪರೀಕ್ಷೆ ನಡೆಸುವ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರ್‌ವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಚನ್ನಬಸಯ್ಯ, ಬಿಬಿಎ ವಿಭಾಗದ ಹೆಚ್‌ಓಡಿ ಡಾ.ಪಲ್ಲವಿ, ಎನ್‌ಸಿಡಿ ಜಿಲ್ಲಾ ಕಾರ್ಯಕ್ರಮ ಸಂಯೋಜಕರಾದ ಡಾ.ಜಬೀನ್‌ತಾಜ್, ಜಿಲ್ಲಾ ಎಪಿಡಮಾಲಾಜಿಸ್ಟ್ ಡಾ.ನಿವೇದಿತಾ, ಜಿಲ್ಲಾ ಮೈಕ್ರೋಬಯಾಲಾಜಿಸ್ಟ್ ಶರತ್ ಬಾಬು, ಜಿಲ್ಲಾ ತಂಬಾಕು ಸಲಹೆಗಾರ ಪ್ರಶಾಂತ್ ಸೇರಿದಂತೆ ಜಿಲ್ಲಾ ಸರ್ವೇಕ್ಷಣಾ ಘಟಕ ಮತ್ತು ಜಿಲ್ಲಾ ಕಾಲರಾ ನಿಯಂತ್ರಣ ತಂಡದ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030