ಬಳ್ಳಾರಿ; ವಿಶ್ವ ರೇಬಿಸ್ ದಿನಾಚರಣೆ ಅಂಗವಾಗಿ ಜನಜಾಗೃತಿ ಜಾಥಾ
ನಾಯಿ ಕಡಿತಕ್ಕೆ ತಪ್ಪದೇ ಲಸಿಕೆ ಪಡೆಯಿರಿ: ಡಾ.ಮರಿಯಂಬಿ.ವಿ.ಕೆ
ಬಳ್ಳಾರಿ,:ನಾಯಿ ಕಡಿದ ಸಂದರ್ಭದಲ್ಲಿ ಗಾಯವನ್ನು ಸೋಪಿನಿಂದ 15 ನಿಮಿಷಗಳ ಕಾಲ ನೀರಿನಲ್ಲಿ ತೊಳೆದು, ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಸಲಹೆ ಮೇರೆಗೆ ತಪ್ಪದೇ ಲಸಿಕೆ ಪಡೆಯಬೇಕು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ.ವಿ.ಕೆ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ ರಾಷ್ಟಿಯ ರೇಬೀಸ್ ನಿಯಂತ್ರಣ ಕಾರ್ಯಕ್ರಮದಡಿ “ವಿಶ್ವ ರೇಬಿಸ್ ದಿನಾಚರಣೆ” ಅಂಗವಾಗಿ ‘ರೇಬಿಸ್ ಗಡಿಗಳನ್ನು ಮೀರಿ ಮುಂದುವರೆಯೋಣ’ ಎಂಬ ಘೋಷವಾಕ್ಯದೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಮುಂಭಾಗದಿAದ ಶುಕ್ರವಾರ ಹಮ್ಮಿಕೊಂಡಿದ್ದ ಜನ ಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.
2030ರ ವೇಳೆಗೆ ನಾಯಿ ಕಡಿತದ ಮೂಲಕ ಹರಡುವ ರೇಬಿಸ್ ಖಾಯಿಲೆಯಿಂದ ಸಂಭವಿಸುವ ಸಾವಿನ ಸಂಖ್ಯೆಯನ್ನು ಶೂನ್ಯ ಪ್ರಮಾಣಕ್ಕಿಳಿಸುವ ಗುರಿಯನ್ನು ಸಾಧಿಸಲು ಕ್ರಿಯಾ ಯೋಜನೆಗೆ ವಿಶ್ವದಾದ್ಯಂತ ಚಾಲನೆ ನೀಡಲಾಗಿದೆ. ಕರ್ನಾಟಕ ಸೇರಿದಂತೆ ಭಾರತ ದೇಶವು ಇದೇ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಕಾರ್ಯನ್ಮುಖವಾಗಿದೆ ಎಂದು ತಿಳಿಸಿದರು.
ರೇಬಿಸ್ ಖಾಯಿಲೆಗೆ ಯಾವುದೇ ಚಿಕಿತ್ಸೆ ಇರುವುದಿಲ್ಲ, ಇದು ಒಂದು ಮಾರಾಂಣಾತಿಕ ಖಾಯಿಲೆಯಾಗಿದ್ದು, ನಾಯಿ ಕಚ್ಚಿದ ನಂತರ ಗಾಯವನ್ನು ಹರಿಯುವ ಸ್ವಚ್ಚ ನೀರಿನಲ್ಲಿ 15 ನಿಮಿಷಗಳ ಕಾಲ ತೊಳೆಯುವುದರಿಂದ ಶೇ.50 ರಿಂದ 70 ರಷ್ಟು ರೇಬಿಸ್ಗೆ ತುತ್ತಾಗುವುದನ್ನು ತಡೆಯಬಹುದು ಎಂದರು.
ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಸಲಹೆ ಪಡೆದು ಪೋಸ್ಟ್ ಎಕ್ಸ್ಪೋಸರ್ ಪ್ರೊಫಿಲ್ಯಾಕ್ಸಿಸ್ ಅನ್ನು ಸಂಪೂರ್ಣವಾಗಿ ಎಲ್ಲಾ 5 ಡೋಸ್ಗಳನ್ನು ಕ್ರಮವಾಗಿ 1, 3, 7, 14 ಮತ್ತು 28 ನಿಗಧಿಪಡಿಸಿದ ದಿನಗಳಂದು ಪಡೆಯಬೇಕು ಮತ್ತು ರೇಬೀಸ್ ಇಮ್ಯೂನೊಗ್ಲೊಬ್ಯುಲಿನ್ ಪಡೆಯುವುದರ ಮೂಲಕ ರೇಬಿಸ್ನ್ನು ಸಂಪೂರ್ಣವಾಗಿ ತಡೆಗಟ್ಟಬಹುದು ಎಂದರು.
ಪ್ರಸ್ತುತ ಜಿಲ್ಲೆಯಲ್ಲಿ 10 ಆ್ಯಂಟಿ ರೇಬಿಸ್ ಕ್ಲಿನಿಕ್ಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಲಭ್ಯವಾಗುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಸರ್ವೇಕ್ಷಣಾ ಘಟಕದ ಎನ್ಆರ್ಸಿಪಿ ಕಾರ್ಯಕ್ರಮದಡಿ ಎಲ್ಲಾ ಪ್ರಾಣಿ, ನಾಯಿ ಕಡಿತ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ಪರಿವೀಕ್ಷಣೆಯಲ್ಲಿಟ್ಟಿದ್ದು ರೋಗ ನಿಯಂತ್ರಣ ಚಟುವಟಿಕೆಗಳನ್ನು ಬಲಪಡಿಸಲು ತರಬೇತಿ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಇದಕ್ಕೆ ಅಂತರ್ ಇಲಾಖಾ ಸಹಕಾರವೂ ಅತ್ಯವಶ್ಯಕವಾಗಿದೆ ಎಂದು ಹೇಳಿದರು.
ಪಶುಪಾಲನ ಮತ್ತು ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ.ವಿನೋದ್ ಕುಮಾರ್ ಅವರು ಮಾತನಾಡಿ, ರೇಬಿಸ್ ಖಾಯಿಲೆಗೆ ಒಮ್ಮೆ ತುತ್ತಾದ ಬಳಿಕ ಯಾವುದೇ ಚಿಕಿತ್ಸೆ ಇರುವುದಿಲ್ಲವಾದರೂ ರೇಬಿಸ್ ಖಾಯಿಲೆಯು ಸೂಕ್ತ ಪೂರ್ವ ರೋಗ ನಿರೋಧಕ ಲಸಿಕೆ ಪಡೆಯುವುದರಿಂದ ಸಂಪೂರ್ಣವಾಗಿ ತಡೆಗಟ್ಟಬಹುದಾಗಿದೆ ಎಂದು ತಿಳಿಸಿದರು.
ಪಶುವೈದ್ಯಕೀಯ ಇಲಾಖೆಯ ವತಿಯಿಂದ ಸೆಪ್ಟೆಂಬರ್ ತಿಂಗಳಲ್ಲಿ ನಗರ, ಗ್ರಾಮಾಂತರ ಪ್ರದೇಶಗಳಲ್ಲಿ ಕ್ಯಾಂಪೇನ್ ಮೋಡ್ನಲ್ಲಿ ಬೀದಿ ನಾಯಿಗಳು ಮತ್ತು ಸಾಕು ನಾಯಿಗಳಿಗೆ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದರು.
ವಿಶೇಷವಾಗಿ ನಗರ ಪ್ರದೇಶಗಳಲ್ಲಿ ನಾಯಿಗಳ ಸಾಕಾಣಿಕೆ ಮಾಡಿಕೊಂಡಿರುವ ಮಾಲೀಕರು ತಪ್ಪದೇ ನಾಯಿಗಳಿಗೆ ಲಸಿಕೆ ಹಾಕಿಸಬೇಕು. ಈಗಾಗಲೇ ರೇಬಿಸ್ ಖಾಯಿಲೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ 2030 ವೇಳೆಗೆ ರೇಬಿಸ್ ಖಾಯಿಲೆಯಿಂದ ಮುಕ್ತರಾಗಲೂ ಎಲ್ಲರೂ ಕೈ ಜೋಡಿಸೋಣ ಎಂದರು.
ಕಾರ್ಯಕ್ರಮದಲ್ಲಿ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರಾಜಶೇಖರ್, ಕುಟುಂಬ ಕಲ್ಯಾಣಾಧಿಕಾರಿ ಡಾ.ಪೂರ್ಣಿಮಾ ಎಸ್. ಕಟ್ಟಿಮನಿ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಇಂದ್ರಾಣಿ.ವಿ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ವಿರೇಂದ್ರ ಕುಮಾರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಜಿಲ್ಲಾ ಎಪಿಡಮಾಲಾಜಿಸ್ಟ್ ಡಾ. ನಿವೇದಿತಾ, ಜಿಲ್ಲಾ ಮೈಕ್ರೋಬಯಾಲಾಜಿಸ್ಟ್ ಶರತ್ ಬಾಬು, ಎನ್ಸಿಡಿ ಜಿಲ್ಲಾ ಕಾರ್ಯಕ್ರಮ ಸಂಯೋಜಕ ಡಾ.ಜಬೀನ್ತಾಜ್, ಜಿಲ್ಲಾ ತಂಬಾಕು ಸಲಹೆಗಾರರಾದ ಪ್ರಶಾಂತ್, ಶ್ರೀದೇವಿ ಹಾಗೂ ಜಿಲ್ಲಾ ಸರ್ವೇಕ್ಷಣಾ ಘಟಕದ ಸಿಬ್ಬಂದಿಗಳು ಉಪಸ್ಥಿತರಿದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030