ಗಣಪತಿ ಹಬ್ಬದ ನಿಮಿತ್ತ ಮಣ್ಣಿನ ಗಣೇಶ ಮೂರ್ತಿ ತಯಾರಿಸಿ ಸಂಭ್ರಮಿಸಿದ ಶಾಲಾ ಮಕ್ಕಳು
ಪರಿಸರ ಸ್ನೇಹಿ ಗೌರಿಗಣೇಶ ಹಬ್ಬ ಆಚರಿಸಲು ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ ಕರೆ
ಬಳ್ಳಾರಿ:ಸಾರ್ವಜನಿಕರು ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ರಾಸಾಯನಿಕಯುಕ್ತ ಬಣ್ಣ ಲೇಪಿತ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡದೇ, ಪರಿಸರ ಸ್ನೇಹಿ ಗೌರಿಗಣೇಶ ಹಬ್ಬ ಆಚರಿಸುವ ಮೂಲಕ ನೈಸರ್ಗಿಕ ಜಲ ಸಂಪನ್ಮೂಲಗಳನ್ನು ಸಂರಕ್ಷಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಕರೆ ನೀಡಿದರು.
ಅರಣ್ಯ ಇಲಾಖೆ ವತಿಯಿಂದ ನಗರದ ಬೆಳಗಲ್ ಕ್ರಾಸ್ನ ಅರಣ್ಯ ಇಲಾಖೆಯ ನರ್ಸರಿ ಪ್ರಕೃತಿ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಎರಡು ದಿನಗಳ ಪರಿಸರ ಸ್ನೇಹಿ ಗಣೇಶ ಮೂರ್ತಿ ರಚನಾ ಕಾರ್ಯಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭೂಮಿ ಮೇಲೆ ಮನುಷ್ಯ ಸೇರಿದಂತೆ ಎಲ್ಲಾ ಜೀವಿಗಳು ಸಮೃದ್ದಿಯಾಗಿ ಜೀವಿಸಲು ಗಾಳಿ, ನೀರು, ಆಹಾರ ಮೂಲಭೂತವಾಗಿ ಬೇಕು, ಇದೆಲ್ಲವನ್ನು ನಮಗೆ ನೀಡುವ ಪರಿಸರದ ಸಂರಕ್ಷಣೆ ಅತ್ಯಗತ್ಯವಾಗಿದೆ. ಪರಿಸರದಲ್ಲಿ ಅನೈರ್ಮಲ್ಯತೆ ಕಡಿಮೆ ಮಾಡಲು ಪರಿಸರ ಸ್ನೇಹಿ ಗಣೇಶ ಹಬ್ಬವನ್ನು ಆಚರಿಸೋಣ ಎಂದು ಹೇಳಿದರು.
ಪಿಒಪಿ, ಬಣ್ಣದ ವಿಗ್ರಹಗಳನ್ನು ಸ್ಥಾಪಿಸಿ ಪೂಜಿಸಿದ ನಂತರ ಕೆರೆ, ಬಾವಿ ಹಾಗೂ ಕಾಲುವೆಗಳಿಗೆ ವಿಸರ್ಜಿಸುವುದರಿಂದ ನೈಸರ್ಗಿಕ ಜಲಮೂಲಗಳು ಕಲುಷಿತಗೊಂಡು ಭೌತಿಕ ಹಾಗೂ ರಾಸಾಯನಿಕ ಗುಣ ಮಾರ್ಪಟ್ಟು ಪರಿಸರದ ಮೇಲೆ ದುಷ್ಪರಿಣಾಮ ಬೀರಲಿದೆ. ಪ್ರಾಣಿ, ಪಕ್ಷಿ ಹಾಗೂ ಜಲಚರಗಳ ಜೀವಿಗಳು ಮತ್ತು ಸಾರ್ವಜನಿಕರ ಆರೋಗ್ಯದ ಮೇಲೂ ಕ್ಕೂ ಅಪಾಯವಾಗಲಿದೆ ಎಂದು ಅವರು ತಿಳಿಸಿದರು.
ಜಲ ಮೂಲಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣ ಲೇಪಿತವಾದ ವಿಗ್ರಹಗಳನ್ನು ವಿಸರ್ಜಿಸುವುದನ್ನು ನಿಷೇಧಿಸಲಾಗಿರುವ ಕುರಿತು ಆದೇಶವಿದ್ದು, ಉಲ್ಲಂಘಿಸಿದ್ದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಯವರು ಹೇಳಿದರು.
ಬಳ್ಳಾರಿ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಸೂರ್ಯವಂಶಿ ಅವರು ಮಾತನಾಡಿ, ಗಣೇಶ ಹಬ್ಬದಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳಿಂದ ಪರಿಸರ ರಕ್ಷಣೆ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಪರಿಸರ ಉಳಿಸಬೇಕಾದ್ದು, ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದರು.
ಪರಿಸರ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ, ಪ್ಲಾಸ್ಟಿಕ್ ಮುಕ್ತ ಪರಿಸರ ರಕ್ಷಣೆ ಮಾಡುವ ಜತೆಗೆ ಮನೆ ಮುಂದೆ ಸಸಿಗಳನ್ನು ನೆಡುವ ಮೂಲಕ ಪರಿಸರ ರಕ್ಷಣೆಗೆ ಮುಂದಾಗಬೇಕು. ಸಾರ್ವಜನಿಕವಾಗಿ ನಡೆಸುವ ಗಣೇಶ ಮೂರ್ತಿಯ ಉತ್ಸವಕ್ಕೆ ಪರಿಸರ ಸ್ನೇಹಿ ವಸ್ತುಗಳನ್ನೇ ಬಳಸಬೇಕು. ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮಾಡಬಾರದು ಎಂದರು.
ಈ ಸಂದರ್ಭದಲ್ಲಿ ಪ್ಯಾರಾ ಈಜುಗಾರ್ತಿ ಕವಿತಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸುನೀಲ್ ಕುಮಾರ್ ಚೌವ್ಹಾಣ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶರಣ್ ಕುಮಾರ್, ವಲಯ ಅರಣ್ಯ ಅಧಿಕಾರಿ ಗಿರೀಶ್ ಕುಮಾರ್.ಡಿ.ಕೆ., ಗಸ್ತು ಪಾಲಕ ಅರಣ್ಯ ಪಾಲಕರಾದ ಹನುಮೇಶ್, ಅಶೋಕ.ಎ ಸೇರಿದಂತೆ ಮಹಾನಗರ ಪಾಲಿಕೆಯ ಅಧಿಕಾರಿಗಳು, ಅರಣ್ಯ ಇಲಾಖೆಯ ಸಿಬ್ಬಂದಿಗಳು, ವಿವಿಧ ಎನ್ಜಿಒ ಸಂಸ್ಥೆಗಳು, ವಿವಿಧ ಶಾಲಾ ಮಕ್ಕಳು ಹಾಗೂ ಇನ್ನೀತರರು ಇದ್ದರು.
ಇದೇ ವೇಳೆ ಮಕ್ಕಳು ಮಣ್ಣಿನ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಸಿ ಸಂಭ್ರಮಿಸಿದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030