ಧಾರವಾಡದ ಚರಂಡಿಗಳಲ್ಲಿ ಜಾನುವಾರುಗಳ ರಕ್ತ, ಮಾಂಸದ ತುಂಡು: ಅಧಿಕಾರಿಗಳ ದಿಢೀರ್ ಭೇಟಿ
ಧಾರವಾಡ, : ಧಾರವಾಡದ ನವಲಗುಂದ ರಸ್ತೆಯಲ್ಲಿರುವ ಕಸಾಯಿಖಾನೆಗೆ ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ ಅವರು ಅಧಿಕಾರಿಗಳ ಸಮೇತ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಸಾಯಿಖಾನೆಯಿಂದ ವಾಸನೆ, ಚರಂಡಿಯಲ್ಲಿ ಜಾನುವಾರುಗಳ ರಕ್ತ, ಮಾಂಸದ ತುಂಡುಗಳು ಎಲ್ಲಿ ಬೇಕಾದಲ್ಲಿ ಬೀಳುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯುಂಟಾಗುತ್ತಿದೆ ಎಂಬ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಉಪಲೋಕಾಯುಕ್ತರು ಇಂದು ಕಸಾಯಿಖಾನೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೊದಲ ಕಿತ್ತೂರು ಕದನದಲ್ಲಿ ಹತನಾದ ಬ್ರಿಟೀಷ್ ಅಧಿಕಾರಿ ಎಸ್.ಟಿ.ಜಾನ್ ಥ್ಯಾಕರೆ ಸಮಾಧಿ ಇದೇ ಕಸಾಯಿಖಾನೆ ಆವರಣದಲ್ಲಿದ್ದು, ಅದನ್ನು ಕಂಡ ಉಪಲೋಕಾಯುಕ್ತರು ಅಚ್ಚರಿ ಪಟ್ಟಿದ್ದಾರೆ. ಸ್ಥಳದಲ್ಲೇ ಪುರಾತತ್ವ ಇಲಾಖೆ ಸಿಬ್ಬಂದಿಯನ್ನು ಕರೆಯಿಸಿ ಈ ಐತಿಹಾಸಿಕ ಸ್ಮಾರಕವನ್ನು ಏಕೆ ಸುರಕ್ಷಿತವಾಗಿ ಇಟ್ಟಿಲ್ಲ? ಇದನ್ನು ಸಂರಕ್ಷಣೆ ಮಾಡಬೇಕಾದದ್ದು ಇಲಾಖೆ ಕರ್ತವ್ಯ ಎಂದು ತರಾಟೆಗೆ ತೆಗೆದುಕೊಂಡರು.
ಇದು ಪುರಾತತ್ವ ಇಲಾಖೆ ಅಡಿ ಬಂದರೆ ಇದನ್ನು ಮ್ಯೂಸಿಯಂ ರೀತಿಯಲ್ಲಿ ಪರಿವರ್ತನೆ ಮಾಡಬೇಕು. ಪಾಲಿಕೆ ವ್ಯಾಪ್ತಿಗೆ ಬಂದರೆ ಈ ಜಾಗದಲ್ಲಿ ಮಾರಾಟ ಮಳಿಗೆಗಳನ್ನು ನಿರ್ಮಾಣ ಮಾಡಬೇಕು. ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ನನಗೆ ಭೇಟಿಯಾಗಿ ಎಂದು ಉಪಲೋಕಾಯುಕ್ತರು ಪುರಾತತ್ವ ಇಲಾಖೆ ಅಧಿಕಾರಿ ಸೂಚನೆ ನೀಡಿದರು.
ಬಳಿಕ ಕಸಾಯಿಖಾನೆಗೆ ಭೇಟಿ ನೀಡಿದ ಉಪಲೋಕಾಯುಕ್ತ ಫಣೀಂದ್ರ ಅವರು, ಅಲ್ಲಿನ ವ್ಯಾಪಾರಸ್ಥರ ಸಮಸ್ಯೆ ಆಲಿಸಿದರು. ಜಾನುವಾರುಗಳ ತ್ಯಾಜ್ಯವನ್ನು ಪ್ರತಿದಿನ ವಿಲೇವಾರಿ ಮಾಡಬೇಕು. ಸುತ್ತಮುತ್ತಲ ಜನರಿಗೆ ಕಸಾಯಿಖಾನೆಯಿಂದ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಕಸಾಯಿಖಾನೆ ಬಳಿಯೇ ಇದ್ದ ಚರಂಡಿಯೊಂದನ್ನು ಕಂಡು ಗರಂ ಆದ ಉಪಲೋಕಾಯುಕ್ತರು, ಆ ಚರಂಡಿ ಕ್ಲೀನ್ ಮಾಡಿಸುವಂತೆ ಝೋನಲ್ ಅಧಿಕಾರಿಗೆ ಖಡಕ್ ಸೂಚನೆ ನೀಡಿದರು. ಈ ವೇಳೆ ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾ ಪಂಚಾಯ್ತಿ ಸಿಇಓ ಸ್ವರೂಪಾ ಟಿ.ಕೆ., ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಸೇರಿದಂತೆ ಅನೇಕ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು…
ವರದಿ. ಮಹಾಲಿಂಗ ಗಗ್ಗರಿ, ಬೆಳಗಾವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030