ಮಿಷನ್ ವಿದ್ಯಾಕಾಶಿ
ಜಿಲ್ಲೆಯಲ್ಲಿ ಜರುಗಿದ ಎಸ್.ಎಸ್.ಎಲ್.ಸಿ ಮಾದರಿಯ ಬೆಸ್‍ಲೈನ್ ಪರೀಕ್ಷೆ;
ಮೆಚ್ಚುಗೆ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವರು
ಧಾರವಾಡ : ಧಾರವಾಡ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶ ಮತ್ತು ಶೈಕ್ಷಣಿಕ ಗುಣಮಟ್ಟದ ಸುಧಾರಣೆಗೆ ಮಿಷನ್ ವಿದ್ಯಾಕಾಶಿ ಯೋಜನೆ ಮೂಲಕ ವಿಶಿಷ್ಟ ಕ್ರಮಗಳನ್ನು ಕೈಗೊಳ್ಳುತ್ತಿರುವ ಧಾರವಾಡ ಜಿಲ್ಲಾಡಳಿತವು ಇಂದು ಜಿಲ್ಲೆಯ ಎಲ್ಲ ಪ್ರೌಢಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ ಮಕ್ಕಳಿಗೆ ಏಕಕಾಲಕ್ಕೆ ಬೋರ್ಡ ಎಕ್ಸಾಂ ಮಾದರಿಯಲ್ಲಿ ಬೇಸಲೈನ್ ಪರೀಕ್ಷೆ ಆಯೋಜಿಸಿರುವದನ್ನು ನವಲೂರ ಸರಕಾರಿ ಪ್ರೌಢಶಾಲೆಯಲ್ಲಿ ಪರಿಶೀಲಿಸಿದ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಡಳಿತದ ಕ್ರಮಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಪರೀಕ್ಷಾ ಸಮಯದಲ್ಲಿ ಇಂದು ಬೆಳಿಗ್ಗೆ ನವಲೂರ ಸರಕಾರಿ ಪ್ರೌಢಶಾಲೆಗೆ ಜಿಲ್ಲಾಧಿಕಾರಿಗಳೊಂದಿಗೆ ಭೇಟಿ ನೀಡಿದ ಸಚಿವರು, ಪ್ರಶ್ನೆ ಪತ್ರಿಕೆ ಸ್ವರೂಪ, ಕಠಿಣತೆ ಹಾಗೂ ಪರೀಕ್ಷೆಯ ಬಗ್ಗೆ ವಿದ್ಯಾರ್ಥಿಗಳ ಅಭಿಪ್ರಾಯ ಪಡೆದರು.
ನಂತರ ಅವರು ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿ, ಹತ್ತನೆಯ ತರಗತಿಯ ಪಠ್ಯಕ್ರಮದಲ್ಲಿ ಕೌಶಲ್ಯಭರಿತ ತರಬೇತಿ ನೀಡುವ ಮತ್ತು ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯ್ಯಾರಾಗುವ ಅಂಶಗಳು ಸೇರಬೇಕು. ಶಿಕ್ಷಣದ ನಂತರ ವಿದ್ಯಾರ್ಥಿ ಸ್ವಾವಲಂಬಿ ಆಗುವಂತೆ ರೂಪಿಸುವ ಶಿಕ್ಷಣ ಬೇಕು ಎಂದರು. ಶೈಕ್ಷಣಿಕ ವಲಯದ ಸಮಗ್ರ ಬದಲಾವಣೆಗೆ ಇಂತಹ ಕ್ರಮಗಳ ಅಗತ್ಯವಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಇಂದು ಬೆಳಿಗ್ಗೆ 10.30 ರಿಂದ 1.30 ರವರೆಗೆ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಮಕ್ಕಳಲ್ಲಿನ ಕಲಿಕಾ ಗುಣಮಟ್ಟ ಮತ್ತು ಸಾಮಥ್ರ್ಯ ತಿಳಿಯಲು ಎಸ್.ಎಸ್.ಎಲ್.ಸಿ ಬೋರ್ಡ ಮಾದರಿಯ ಬೆಸ್‍ಲೈನ್ ಪರೀಕ್ಷೆಯನ್ನು ಆಯೋಜಿಸಲಾಗಿದೆ.
ಪರೀಕ್ಷೆಯನ್ನು ಜಿಲ್ಲೆಯ 466 ಪ್ರೌಢಶಾಲೆಗಳ 1262 ಬ್ಲಾಕ್‍ಗಳಲ್ಲಿ ಏಕಕಾಲಕ್ಕೆ ಜರುಗಿಸಲಾಗುತ್ತಿದೆ. ಇದರಲ್ಲಿ ಕನ್ನಡ ಮಾಧ್ಯಮದ 270 ಪ್ರೌಢಶಾಲೆಗಳ 18487 ವಿದ್ಯಾರ್ಥಿಗಳು, ಇಂಗ್ಲೀಷ ಮಾಧ್ಯಮದ 166 ಪ್ರೌಢಶಾಲೆಗಳ 8967 ವಿದ್ಯಾರ್ಥಿಗಳು, ಉರ್ದು ಮಾಧ್ಯಮದ 24 ಪ್ರೌಢಶಾಲೆಗಳ 2500 ವಿದ್ಯಾರ್ಥಿಗಳು, ಹಿಂದಿ ಮಾಧ್ಯಮದ 2 ಪ್ರೌಢಶಾಲೆಗಳ 30 ವಿದ್ಯಾರ್ಥಿಗಳು ಮತ್ತು ತೆಲಗು ಮಾಧ್ಯಮದ 4 ಪ್ರೌಢಶಾಲೆಗಳ 17 ವಿದ್ಯಾರ್ಥಿಗಳು ಸೇರಿ ಒಟ್ಟು ಐದು ಮಾಧ್ಯಮಗಳಲ್ಲಿ 27625 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಇಂದಿನ ಬೆಸ್‍ಲೈನ್ ಪರೀಕ್ಷೆಗೆ ನೋಂದಾಯಿಸಿಕೊಂಡಿರುವ 13783 ವಿದ್ಯಾರ್ಥಿಗಳು ಮತ್ತು 13842 ವಿದ್ಯಾರ್ಥಿನೀಯರು ಸೇರಿ ಒಟ್ಟು 27625 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, 2456 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಗೈರಾಗಿರುವ ವಿದ್ಯಾರ್ಥಿಗಳ ಮನೆ ಭೇಟಿ, ಪಾಲಕರ ಸಭೆ, ಆಯೋಜನೆ ಮೂಲಕ ಶಾಲೆಗೆ ನಿರಂತರವಾಗಿ ಬರುವಂತೆ ಜಿಲ್ಲಾಡಳಿತದಿಂದ ಪ್ರಯತ್ನ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದರು.
ಶಿಕ್ಷಣ ಇಲಾಖೆಯೊಂದಿಗೆ ಕಂದಾಯ, ಪಂಚಾಯತರಾಜ್, ಪಿ.ಡಬ್ಲ್ಯೂಡಿ, ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಇಂದಿನ ಪರೀಕ್ಷೆಗೆ ಅಬರ್ಸರವರ್, ರೂಟ್ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲೆಯ ವಿವಿಧ ಇಲಾಖೆ ಅಧಿಕಾರಿಗಳ ಸಹಕಾರದಲ್ಲಿ ಯಾವುದೇ ಲೋಪವಾಗದಂತೆ ಪರೀಕ್ಷೆಯನ್ನು ಜರುಗಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಉಪವಿಭಾಗಾಧಿಕಾರಿಗಳು ಶಾಲಂ ಹುಸೇನ್, ತಹಶೀಲ್ದಾರ ಡಿ.ಹೆಚ್.ಹೂಗಾರ, ಮಿಷನ್ ವಿದ್ಯಾಕಾಶಿ ಶೈಕ್ಷಣಿಕ ಸಮಿತಿ ಅಧ್ಯಕ್ಷ ಪ್ರೋ. ಎಸ್.ಎಂ.ಶಿವಪ್ರಸಾದ, ಹಾಗೂ ಬೇರೆ ಬೇರೆ ಸಮಿತಿಗಳ ಸದಸ್ಯರಾದ ಪ್ರಕಾಶ ಹಳಪೇಟ, ಎಸ್.ಎಂ.ಉದಯಶಂಕರ, ಮಹೇಶ ಮಾಸಾಳ, ಉಪನಿರ್ದೇಶಕ ಎಸ್.ಎಸ್.ಕೆಳದಿಮಠ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಶೋಕ ಸಿಂದಗಿ, ಉಮೇಶ ಬೊಮ್ಮಕ್ಕನವರ, ರಾಮಕೃಷ್ಣ ಸದಲಗಿ, ಚನ್ನಪ್ಪ ಗೌಡ, ಮಹಾದೇವಿ ಬಸಾಪುರ, ಮಹಾದೇವಿ ಮಾಡಲಗೇರಿ, ಎಸ್.ಬಿ.ಮಲ್ನಾಡ ಹಾಗೂ ಎಲ್ಲ ತಹಶೀಲ್ದಾರರು, ಬಿ.ಆರ್.ಸಿ., ಸಿ.ಆರ್.ಸಿ ಅವರು ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ, ಪರೀಕ್ಷೆ ಸುಗಮವಾಗಿ ಮತ್ತು ನಿಯಮಾನುಸಾರ ನಡೆಯುವಂತೆ ನಿಗಾವಹಿಸಿದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030