ಕ್ಯಾನ್ಸರ್ ಖಾಯಿಲೆಗೆ ಆಧುನಿಕ ಜೀವನ ಶೈಲಿ ಕಾರಣ;
ಜೀವನ ವಿಧಾನ, ಆಹಾರ ಪದ್ಧತಿ ಬದಲಾಗಬೇಕು: ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಂಗಪ್ಪಾ ಗಾಬಿ
ಧಾರವಾಡ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಎನ್.ಸಿ.ಡಿ ಘಟಕ, ಜಿಲ್ಲಾ ಎನ್.ಸಿ.ಡಿ ಕ್ಲಿನಿಕ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ತಂಬಾಕು ವ್ಯಸನಮುಕ್ತ ಕೇಂದ್ರ, ಧಾರವಾಡ ಜಿಲ್ಲಾ ಆಸ್ಪತ್ರೆಯಿಂದ ರಾಷ್ಟ್ರೀಯ ಅಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ವiತ್ತು ನಿಯಂತ್ರಣ ಕಾರ್ಯಕ್ರಮ (ಎನ್‍ಪಿ-ಎನ್‍ಸಿಡಿ) ದಡಿಯಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಇಂದು ಮಧುಮೇಹ, ರಕ್ತದೊತ್ತಡ ಹಾಗೂ ಸಾಮಾನ್ಯ ಕ್ಯಾನ್ಸರ್ ಉಚಿತ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿತ್ತು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಂಗಪ್ಪಾ ಗಾಬಿ ಅವರು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಡಾ. ಸಂಗಪ್ಪಾ ಗಾಬಿ ಅವರು ಮಾತನಾಡಿ, ಧಾರವಾಡ ಜಿಲ್ಲೆಯಲ್ಲಿ ಕಳೆದ ಎಪ್ರಿಲ್ 2024 ರಿಂದ ಜನವರಿ 2025 ವರೆಗೆ ಧಾರವಾಡ ಜಿಲ್ಲಾ ಆಸ್ಪತ್ರೆಯ ಎನ್.ಸಿ.ಡಿ ಕ್ಲಿನಿಕ್‍ದಲ್ಲಿ ವಿವಿಧ ರೀತಿಯ ಸುಮಾರು 57 ಕ್ಯಾನ್ಸರ್ ಪ್ರಕರಣಗಳು ದಾಖಲಾಗಿವೆ ಎಂದರು.
ಜನರ ಜೀವನ ಶೈಲಿಯಿಂದ ಇಂದು ಕ್ಯಾನ್ಸರ್ ರೋಗವು ಸಾಮಾನ್ಯವಾಗಿ ಕಾಣುತ್ತಿದೆ. ಧಾರವಾಡ ಜಿಲ್ಲೆಯಲ್ಲಿ ನಾಲಿಗೆ ಕ್ಯಾನ್ಸರ್, ಬಾಯಿ ಹುಣ್ಣಿನ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಧ್ವನಿಪೆಟ್ಟಿಗೆಯ ಕ್ಯಾನ್ಸರ್ ಕಂಡುಬರುತ್ತಿವೆ. ಜಿಲ್ಲಾ ಆಸ್ಪತ್ರೆ ಹಾಗೂ ಜಿಲ್ಲೆಯ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಕ್ಯಾನ್ಸರ್ ತಪಾಸಣೆ ಮಾಡಲಾಗುತ್ತದೆ. ಕ್ಯಾನ್ಸರ್ ರೋಗ ದೃಢವಾದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್, ನವನಗರ ಕ್ಯಾನ್ಸರ್ ಆಸ್ಪತ್ರೆ ಹಾಗೂ ಇತರ ಖಾಸಗಿ ಕ್ಯಾನ್ಸರ್ ಆಸ್ಪತ್ರೆಗೆ ರೋಗಿಗಳನ್ನು ಕಳುಹಿಸಲಾಗುತ್ತದೆ. ರೋಗದ ಆರಂಭಿಕ ಹಂತದಲ್ಲಿ ಸೂಕ್ತ ಚಿಕಿತ್ಸೆ ಪಡೆದರೆ ಗುಣಪಡಿಸಬಹುದು ಎಂದು ಅವರು ಹೇಳಿದರು.
ಕ್ಯಾನ್ಸರ್ ಬಾದಿತರಿಗೆ ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ನೀಡಲಾಗುತ್ತಿದ್ದು, ಎಪಿಎಲ್ ಕಾರ್ಡ ಹೊಂದಿರುವವರಿಗೆ ಶೇ.30 ರಷ್ಟು ರಿಯಾಯತಿ ಹಾಗೂ ಬಿಪಿಎಲ್ ಕಾರ್ಡ ಹೊಂದಿರುವವರಿಗೆ ಶೇ. 100 ರಷ್ಟು ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು.
ಕ್ಯಾನ್ಸರ್‍ದಂತಹ ಖಾಯಿಲೆಗಳಿಂದ ಮುಕ್ತವಾಗಿರಲು ಉತ್ತಮವಾದ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ತಂಬಾಕು ಉತ್ಪನ್ನ, ಮಧ್ಯಪಾನ ಮತ್ತು ಧೂಮ್ರಪಾನಗಳಿಂದ ದೂರವಿರಬೇಕು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಂಗಪ್ಪ ಗಾಬಿ ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಪರಶುರಾಮ ಎಫ್. ಕೆ. ಅವರು ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ವಿವಿಧ ಎನ್.ಸಿ.ಡಿ ಕ್ಲಿನಿಕ್‍ಗಳಲ್ಲಿ 154 ಪುರಷ ಹಾಗೂ 225 ಮಹಿಳೆಯರು ಸೇರಿ ಒಟ್ಟು 379 ಜನರಲ್ಲಿ ಕ್ಯಾನ್ಸರ್ ತಪಸಣೆ ಮಾಡಲಾಗಿದೆ ಎಂದರು.
ಕ್ಯಾನ್ಸರ್ ಕುರಿತಾದ ಮುಂಜಾಗೃತಾ ಕ್ರಮಗಳು, ತಪಾಸಣೆಯ ಅವಶ್ಯಕತೆ, ಜೀವನ ಶೈಲಿ, ಉತ್ತಮ ಆಹಾರ ಸೇವನೆ, ದುಶ್ಚಟಗಳು ಕುರಿತಾಗಿ ಮತ್ತು ಎನ್.ಸಿ.ಡಿ ಕ್ಲಿನಿಕ್‍ನಲ್ಲಿ ಲಭ್ಯವಿರುವ ಸೇವೆಗಳ ಕುರಿತು ಮಾಹಿತಿ ನೀಡಿದರು. ಸಾರ್ವಜನಿಕರು ಈ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಅವರು ತಿಳಿಸಿದರು.
ಎನ್.ಪಿ.ಪಿ.ಸಿ ವಿಭಾಗದ ಜನರಲ್ ಫಿಜಿಸಿಯನ್ ಡಾ. ವಿವೇಕಾನಂದ ಕಾಮತ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ವಿಶ್ವ ಕ್ಯಾನ್ಸರ್ ದಿನಾಚರಣೆಯ ಘೋಷವಾಕ್ಯ–ವಿಶಿಷ್ಟತೆಯಿಂದ ಏಕತೆ ಕುರಿತು ಹಾಗೂ ಬಾಯಿ, ಸ್ತನ್ ಹಾಗೂ ಗರ್ಭಕೊರಳು ಮುಂತಾದ ಸಾಮಾನ್ಯ ಕ್ಯಾನ್ಸರ್‍ಗಳ ಲಕ್ಷಣಗಳು ಹಾಗೂ ತಡೆಗಟ್ಟುವಿಕೆಯ ಕುರಿತು ಮಾತನಾಡಿದರು.
ನೇತ್ರಾವತಿ ಆಸಂಗಿ ಅವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆಸ್ಪತ್ರೆಯ ಮುಖ್ಯ ಚಿಕಿತ್ಸಕ ಡಾ. ಮಲ್ಲಿಕಾರ್ಜುನ ಸ್ವಾಮಿ, ಜಿಲ್ಲಾ ಎನ್.ಸಿ.ಡಿ. ಕ್ಲಿನಿಕ್‍ನ ಜನರಲ್ ಫಿಜಿಸಿಯನ್ ಡಾ. ವಾಸಂತಿ ಜೀರಗಳ, ಎನ್.ಪಿ.ಎಚ್.ಸಿ.ಇ ಜನರಲ್ ಫಿಜಿಸಿಯನ್ ಡಾ. ನಿವೇದಿತಾ ಪಾಟೀಲ, ಡಾ. ಹೀನಾ ಮತ್ತು ಎನ್.ಪಿ.ಪಿ.ಸಿ ವೈದ್ಯಾಧಿಕಾರಿ ರಿಂದವ್ವ ನಾವಳ್ಳಿ, ಜಿಲ್ಲಾ ಎನ್.ಸಿ.ಡಿ ಘಟಕ ಮತ್ತು ಜಿಲ್ಲಾ ಎನ.ಸಿ.ಡಿ ಕ್ಲಿನಿಕ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ತಂಬಾಕು ವ್ಯಸನಮುಕ್ತ ಕೇಂದ್ರ ಹಾಗೂ ಜಿಲ್ಲಾ ಆಸ್ಪತ್ರೆಯ ಎಲ್ಲ ಸಿಬ್ಬಂದಿಯವರು ಪಾಲ್ಗೊಂಡಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030