ಒತ್ತಡ, ಆತಂಕ, ದುಗುಡ. ಆದರೆ ವಿರಾಟ್ ಕೊಹ್ಲಿ ಬ್ಯಾಟಿಂಗ್ ಎಲ್ಲರಿಗೂ ಸಮಾಧಾನ ನೀಡಿತ್ತು. ವಿರಾಟ್ ಕೊಹ್ಲಿಯ ಹೋರಾಟ ಆಸ್ಟ್ರೇಲಿಯಾ ತಂಡದ ತಲೆನೋವು ಹೆಚ್ಚಿಸಿತ್ತು. ಆದರೆ ಮಹತ್ವದ ಘಟ್ಟದಲ್ಲಿ ಕೊಹ್ಲಿ ವಿಕೆಟ್ ಪತನ ಟೀಂ ಇಂಡಿಯಾದಲ್ಲಿ ಮತ್ತೆ ಆತಂಕಕ್ಕೆ ಕಾರಣಾಗಿತ್ತು.
ಆದರೆ ಅಂತಿಮ ಹಂತದಲ್ಲಿ ಕೆಎಲ್ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ಹೊಡೆತಕ್ಕೆ ಆಸ್ಟ್ರೇಲಿಯಾ ಸುಸ್ತಾಗಿತ್ತು. ಗೆಲುವಿಗೆ ಇನ್ನೇನು 6 ರನ್ ಮಾತ್ರ ಬಾಕಿ ಇತ್ತು. ಅಷ್ಟರಲ್ಲೇ ಪಾಂಡ್ಯ ವಿಕೆಟ್ ಕೈಚೆಲ್ಲಿದರು. ಆದರೆ ರಾಹುಲ್ ಭರ್ಜರಿ ಸಿಕ್ಸರ್ ಸಿಡಿಸಿ ಭಾರತಕ್ಕೆ 4 ವಿಕೆಟ್ ಗೆಲುವು ತಂದುಕೊಟ್ಟರು. ಈ ಮೂಲಕ ಭಾರತ ಚಾಂಪಿಯನ್ಸ್ ಟ್ರೋಫಿ ಫೈನಲ್‌ಗೆ ಲಗ್ಗೆ ಇಟ್ಟಿದೆ.
ವಿರಾಟ್ ಕೊಹ್ಲಿ ಬಿಗ್ ಮ್ಯಾಚ್ ಪ್ಲೇಯರ್ ಅನ್ನೋದರಲ್ಲಿ ಎರಡು ಮಾತಿಲ್ಲ. ಕಳೆ ತಿಂಗಳ ಹಿಂದೆ ವಿರಾಟ್ ಕೊಹ್ಲಿ ಫಾರ್ಮ್ ಸಮಸ್ಯೆ ಎದುರಿಸಿದ್ದರು. ಈ ವೇಳೆ ಕೊಹ್ಲಿ ವಿರುದ್ದ ಮಾಜಿ ಕ್ರಿಕೆಟಿಗರೇ ಟೀಕೆ ವ್ಯಕ್ತಪಡಿಸಿದ್ದರು. ಜೊತೆಗೆ ತಂಡದ ನಿಯಮದಲ್ಲೂ ಕೆಲ ಬದಲಾವಣೆ ಮಾಡಲಾಗಿತ್ತು. ಆದರೆ ಕೊಹ್ಲಿ ತಮ್ಮ ಪರ್ಫಾಮೆನ್ಸ್ ಮೂಲಕ ಉತ್ತರ ನೀಡಿದ್ದಾರೆ. ಆಸ್ಟ್ರೇಲಿಯಾ ಐಸಿಸಿ ಟೂರ್ನಿಗಳಲ್ಲಿ ರಣಭೇಟೆಗಾರ. ದ್ವೀಪಕ್ಷೀಯ ಟೂರ್ನಿಗಳಲ್ಲಿ ಅದೆಷ್ಟೆ ಕಳಪೆ ಆಟವಾಡಿದ್ದರೂ, ಐಸಿಸಿ ಟೂರ್ನಿ ಬಂದಾಗ ಆಟವೇ ಬೇರೆಯಾಗುತ್ತೆ. ಇದರ ನಡುವೆ ಘರ್ಜಿಸುವುದು ಸುಲಭದ ಮಾತಲ್ಲ. ತೀವ್ರ ಒತ್ತಡದ ನಡುವೆಯೂ ವಿರಾಟ್ ಕೊಹ್ಲಿ ತಂಡದ ಜವಾಬ್ದಾರಿ ಹೊತ್ತು ಬ್ಯಾಟಿಂಗ್ ಮಾಡಿದ್ದಾರೆ. ಅದ್ಭುತ ಪ್ರದರ್ಶನ ನೀಡಿದ್ದಾರೆ. ರನ್ ಚೇಸಿಂಗ್ ವೇಳೆ 800 ರನ್ ಪೂರೈಸಿ ಮೈಲಿಗಲ್ಲು ನಿರ್ಮಿಸಿದ್ದಾರೆ.
ಟಾರ್ಗೆಟ್ 265. ಇದಕ್ಕೆ ತಕ್ಕಂತೆ ಟೀಂ ಇಂಡಿಯಾ ಆರಂಭ ಇರಲಿಲ್ಲ. ಕಾರಣ ಶುಬಮನ್ ಗಿಲ್ ಆರಂಭದಲ್ಲೇ ವಿಕೆಟ್ ಕೈಚೆಲ್ಲಿದ್ದರು. ಕೇವಲ 8 ರನ್ ಸಿಡಿಸಿ ಗಿಲ್ ಔಟಾಗಿದ್ದರು. ರೋಹಿತ್ ಶರ್ಮಾ ಉತ್ತಮ ಲಯದಲ್ಲಿದ್ದರು. ಆದರೆ ರೋಹಿತ್ ಆಟ 28 ರನ್‌ಗೆ ಅಂತ್ಯಗೊಂಡಿತ್ತು. 43 ರನ್‌ಗೆ ಭಾರತ 2 ವಿಕೆಟ್ ಕಳೆದುಕೊಂಡಿತ್ತು. ಇನ್ನೇನು ಆಸ್ಟ್ರೇಲಿಯಾ ಪಂದ್ಯದ ಮೇಲೆ ಹಿಡಿತ ಸಾಧಿಸುತ್ತಿದೆ ಅನ್ನುವಷ್ಟರಲ್ಲಿ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಜೊತೆಯಾಟ ಪಂದ್ಯದ ಗತಿ ಬದಲಿಸಿದರು.
ದಿಟ್ಟ ಹೋರಾಟದ ಮೂಲಕ ಇನ್ನಿಂಗ್ಸ್ ಕಟ್ಟಿದ್ದರು. ಶ್ರೇಯಸ್ ಅಯ್ಯರ್ 45 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಈ ವೇಳೆ ಭಾರತ ಕುಸಿತ ಕಂಡರೂ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಭಾರತದ ಆತ್ಮವಿಶ್ವಾಸ ಹೆಚ್ಚಿಸಿತ್ತು. ಆಕ್ಸರ್ ಪಟೇಲ್ 27 ರನ್ ಕಾಣಿಕೆ ನೀಡಿ ನಿರ್ಗಮಿಸಿದ್ದರು. ಕೆಎಲ್ ರಾಹುಲ್ ಜೊತೆ ಸೇರಿದ ವಿರಾಟ್ ಕೊಹ್ಲಿ ಅಬ್ಬರಿಸಿದರು. ಆದರೆ ಗೆಲುವಿನತ್ತ ಹೆಜ್ಜೆ ಇಟ್ಟಿದ್ದ ಭಾರತಕ್ಕೆ ಆಘಾತ ಎದುರಾಗಿತ್ತು. ಕಾರಣ ವಿರಾಟ್ ಕೊಹ್ಲಿ 84 ರನ್ ಸಿಡಿಸಿ ನಿರ್ಗಮಿಸಿದ್ದರು. ಕೊಹ್ಲಿ ವಿಕೆಟ್ ಪತನ ಆಸ್ಟ್ರೇಲಿಯಾ ತಂಡದ ಆತ್ಮವಿಶ್ವಾಸ ಹೆಚ್ಚಿಸಿತ್ತು. ಸೊರಗಿದ್ದ ಆಸೀಸ್ ಮತ್ತಷ್ಟು ಸಂಘಟಿತ ಬೌಲಿಂಗ್ ದಾಳಿಗೆ ಮುಂದಾಯಿತು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030