ವರದಿ. ಸಂದೀಪ್ ಸಿ, ಎಂ, ಹೊಳೆ

ಜಗಳೂರು: ವಿನಾಶದ ಅಂಚಿನಲ್ಲಿರುವ ಕೊಂಡುಕುರಿ ಸಂತತಿಯ ಆವಾಸ ಸ್ಥಾನವಾಗಿರುವ ತಾಲ್ಲೂಕಿನ ರಂಗಯ್ಯನದುರ್ಗ ಅರಣ್ಯ ಪ್ರದೇಶಕ್ಕೆ ಮಂಗಳವಾರ ಬೆಂಕಿ ಬಿದ್ದಿದ್ದು, ಹತ್ತಾರು ಎಕರೆ ಮರಗಿಡಗಳು ಸುಟ್ಟು ಹೋಗಿವೆ.
ಕೊಂಡುಕುರಿ ವನ್ಯಧಾಮದ ಕೊಡೆಗುಂಡು ಹಾಗೂ ವಾಲ್ ಗುಂಡು ಪ್ರದೇಶದಲ್ಲಿ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದ್ದು, ರಾತ್ರಿಯವರೆಗೂ ವ್ಯಾಪಕವಾಗಿ ಹರಡಿದೆ. ಕಡಿಮೆ ಸಂಖ್ಯೆಯಲ್ಲಿದ್ದ ಅರಣ್ಯ ಸಿಬ್ಬಂದಿ ಬೆಂಕಿಯ ಜ್ವಾಲೆಯನ್ನು ನಂದಿಸಲು ಯತ್ನಿಸಿದರೂ ಸಂಪೂರ್ಣ ನಂದಿಸಲು ಸಾಧ್ಯವಾಗಿಲ್ಲ.
‘ದಟ್ಟವಾಗಿ ಬೆಳೆದಿದ್ದ ಹುಲ್ಲಿಗೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಸಾಧ್ಯತೆ ಇದೆ’ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ. ‘ವಿವಿಧ ಜಾತಿಯ ಮರಗಿಡಗಳು ಸುಟ್ಟು ಭಸ್ಮವಾಗಿವೆ. ವಿನಾಶದ ಅಂಚಿನಲ್ಲಿರುವ ಕೊಂಡುಕುರಿ, ಕೃಷ್ಣಮೃಗ, ಚಿಂಕಾರ, ಚಿರತೆ ಸೇರಿದಂತೆ ಅಪಾರ ಜೀವವೈವಿಧ್ಯದ ತಾಣವಾಗಿರುವ ಅರಣ್ಯದಲ್ಲಿ ಈಚೆಗೆ ಸೂಕ್ತ ಸಂರಕ್ಷಣೆ ಹಾಗೂ ಉಸ್ತುವಾರಿ ಕೊರತೆಯಾಗಿದೆ ಎಂಬ ದೂರುಗಳಿವೆ. ಬೆಂಕಿ ಕಾಣಸಿಕೊಂಡ ಸಮಯದಲ್ಲಿ ಸ್ಥಳದಲ್ಲಿ ವಲಯ ಅರಣ್ಯಾಧಿಕಾರಿ, ಪ್ರಮುಖ ಅಧಿಕಾರಿ ಮತ್ತು ಸಿಬ್ಬಂದಿ ಇರಲಿಲ್ಲ ಎನ್ನಲಾಗಿದೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
