ಜಿಲ್ಲಾ ಆಯುಷ್ ಇಲಾಖೆಯಿಂದ ಜಿಲ್ಲೆಯಾದ್ಯಂತ ಅಭಿಯಾನ
ಸಾರ್ವಜನಿಕರ ಆರೋಗ್ಯಕ್ಕಾಗಿ “ಪ್ರಕೃತಿ ಪರೀಕ್ಷಾ ಅಭಿಯಾನ”
ಚಿತ್ರದುರ್ಗ:ಪ್ರಕೃತಿಯನ್ನು ತಿಳಿದು ಅದರ ಅನುಸಾರ ಆರೋಗ್ಯಕರವಾಗಿ ಎಲ್ಲಾ ಸಾರ್ವಜನಿಕರು ಇರಬೇಕು ಎಂಬ ಆಶಯದೊಂದಿಗೆ ಭಾರತ ಸರ್ಕಾರದ ಆಯುಷ್ ಮಂತ್ರಾಲಯ “ದೇಶ್ ಕಿ ಪ್ರಕೃತಿ ಪರೀಕ್ಷೆ” ಅಭಿಯಾನ ಹಮ್ಮಿಕೊಂಡಿದೆ.
ಈ ಅಭಿಯಾನವು ಈಗಾಗಲೇ ಕಳೆದ ನವೆಂಬರ್ 26 ರಿಂದ ಆರಂಭವಾಗಿದ್ದು, ಡಿಸೆಂಬರ್ 25ರವರೆಗೆ ದೇಶಾದ್ಯಂತ ನಡೆಯಲಿದೆ. ಇದು ಮೊಬೈಲ್ ಆ್ಯಪ್ ಆಧಾರಿತ ಕಾರ್ಯಕ್ರಮವಾಗಿದ್ದು, ಈ ಆ್ಯಪ್‍ಅನ್ನು ಅಳವಡಿಸಿಕೊಂಡು ಕೆಲವು ಮೂಲಭೂತ ಪ್ರಶ್ನೆಗಳಿಗೆ ಉತ್ತರಿಸಿದಲ್ಲಿ ಕಾಲಕಾಲಕ್ಕೆ ನಿಮ್ಮ ಪ್ರಕೃತಿ ಅನುಸಾರವಾಗಿ ಆರೋಗ್ಯಕ್ಕೆ ಪೂರಕವಾದ ಸೂಚನೆ, ಸಲಹೆಗಳು ನಿಮ್ಮ ಮೊಬೈಲ್‍ಗೆ ಬರಲಿವೆ. ಈ ಅಭಿಯಾನವನ್ನು ಜಿಲ್ಲಾ ಆಯುಷ್ ಇಲಾಖೆಯೂ ಸಹ ಜಿಲ್ಲೆಯಾದ್ಯಂತ ಹಮ್ಮಿಕೊಂಡಿದೆ. ಆಸಕ್ತ ಸಾರ್ವಜನಿಕರು ಹತ್ತಿರದ ಆಯುಷ್ಆಸ್ಪತ್ರೆಗಳು ಹಾಗೂ ಚಿಕಿತ್ಸಾಲಯಗಳನ್ನು ಸಂಪರ್ಕಿಸಿದಲ್ಲಿ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯವರು ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವಲ್ಲಿ ಹಾಗೂ ನಿಮ್ಮ ಪ್ರಕೃತಿ ನಿರ್ಧರಿಸುವಲ್ಲಿ ಸಹಕರಿಸುತ್ತಾರೆ.
ಕಾಯಿಲೆ ಬಂದಾಗ ವೈದ್ಯರಲ್ಲಿಗೆ ಹೋಗಿ ಔಷಧಿ ತೆಗೆದುಕೊಳ್ಳುವುದು ಚಿಕಿತ್ಸೆಯಾದರೆ ಕಾಯಿಲೆ ಬರದಂತೆಯೇ ಸದೃಢವಾಗಿ ಬದುಕುವುದು ಆರೋಗ್ಯ. ನಾವು ಆರೋಗ್ಯವಾಗಿರಲು ಇರುವ ಏಕೈಕ ಮಾರ್ಗ ಎಂದರೆ ಉತ್ತಮ ಆಹಾರ ಹಾಗೂ ಉತ್ತಮ ಜೀವನ ಶೈಲಿ ರೂಡಿಸಿಕೊಳ್ಳುವುದು. ಮನುಷ್ಯರು ಪ್ರತಿಯೊಬ್ಬ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನ ಭಿನ್ನ. ನಮ್ಮ ಎತ್ತರ, ನಿಲುವು, ಮೈಬಣ್ಣ, ಜೀರ್ಣಶಕ್ತಿ, ಮಾನಸಿಕ ಸ್ಥಿತಿ ಹೀಗೆ ಪ್ರತಿಯೊಬ್ಬರು ಶಾರೀರಿಕವಾಗಿ ಮಾನಸಿಕವಾಗಿ ಒಬ್ಬರಿಗಿಂತ ಇನ್ನೊಬ್ಬರಿಗೆ ಭಿನ್ನ ಇದನ್ನೇ ಆಯುರ್ವೇದದಲ್ಲಿ ಪ್ರಕೃತಿ ಎಂದು ಹೇಳಿದ್ದಾರೆ. ಪ್ರಕೃತಿ ಅನುಸಾರವಾಗಿ ನಾವು ಆಹಾರ, ಜೀವನಶೈಲಿ ರೂಢಿಸಿಕೊಂಡಲ್ಲಿ ನಾವು ಆರೋಗ್ಯಕರವಾಗಿ ಇರಬಹುದು. ಉದಾರಣೆಗೆ ಒಂದು ಪ್ರಮಾಣದ ಆಹಾರ, ಜೀರ್ಣ ಶಕ್ತಿ, ಚೆನ್ನಾಗಿದ್ದವರಲ್ಲಿ ಆರೋಗ್ಯವನ್ನು ನೀಡಿದರೆ ಅದೇ ಪ್ರಮಾಣದ ಆಹಾರ, ಜೀರ್ಣ ಶಕ್ತಿ ದುರ್ಬಲವಾಗಿ ಇರುವವರಲ್ಲಿ ಖಾಯಿಲೆ ಉಂಟುಮಾಡಬಹುದು. ಆದ ಕಾರಣ ನಮ್ಮ ಪ್ರಕೃತಿಗೆ ಅನುಸಾರವಾಗಿ ನಮ್ಮ ಆಹಾರವನ್ನು ನಾವು ರೂಢಿಸಿಕೊಳ್ಳಬೇಕು.
ಆಯುರ್ವೇದದಲ್ಲಿ ಪ್ರಕೃತಿಯನ್ನು ಮೂರು ತರನಾಗಿ ವಿಂಗಡಿಸಿದ್ದಾರೆ. ವಾತ ಪ್ರಕೃತಿ, ಪಿತ್ತ ಪ್ರಕೃತಿ ಹಾಗೂ ಕಫ ಪ್ರಕೃತಿ. ಈ ಪ್ರಕೃತಿಗಳಿಗನುಸಾರವಾಗಿ ಕೆಲವು ತರದ ಕಾಯಿಲೆಗಳು ಬರುವ ಸಾಧ್ಯತೆಗಳು ಇರುತ್ತವೆ. ಉದಾಹರಣೆಗೆ ಕಫ ಪ್ರಕೃತಿ ಇರುವಂತ ವ್ಯಕ್ತಿಯಲ್ಲಿ ಮಧುಮೇಹ, ಬೊಜ್ಜು ಈ ತರದ ಕಾಯಿಲೆಗಳು, ವಾತ ಪ್ರಕೃತಿ ಇದ್ದವರಲ್ಲಿ ಕೀಲು ನೋವು ಈ ತರಹದ ಕಾಯಿಲೆಗಳು, ಪಿತ್ತ ಪ್ರಕೃತಿ ಇದ್ದವರಲ್ಲಿ ಗ್ಯಾಸ್ಟ್ರಿಕ್, ಲಿವರ್‍ಗೆ ಸಂಬಂಧಪಟ್ಟ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚು ಇರುತ್ತವೆ. ನಮ್ಮ ಪ್ರಕೃತಿ ಯಾವುದು ಎಂದು ಮೊದಲೇ ತಿಳಿದು ನಮ್ಮ ಆಹಾರ ವಿಹಾರದಲ್ಲಿ ಬದಲಾವಣೆ ಮಾಡಿಕೊಂಡಲ್ಲಿ ಪ್ರಕೃತಿ ಅನುಸಾರವಾಗಿ ಬರುವ ಖಾಯಿಲೆಗಳಿಂದ ನಾವು ದೂರ ಇರಬಹುದು ಅಥವಾ ಈಗಾಗಲೇ ಕಾಯಿಲೆ ಇದ್ದರೆ ಪ್ರಕೃತಿಯ ಅನುಸಾರ ಆಹಾರ ವಿಹಾರ ರೂಡಿಸಿಕೊಂಡಲ್ಲಿ ಅದನ್ನು ನಿಯಂತ್ರಿಸಬಹುದು.
ಎಲ್ಲಾ ಸಾರ್ವಜನಿಕರು ತಮ್ಮ ತಮ್ಮ ಪ್ರಕೃತಿಯನ್ನು ತಿಳಿದುಕೊಂಡು ಅದರ ಅನುಸಾರವಾಗಿ ನೀಡಲ್ಪಡುವ ಸಲಹೆ, ಸೂಚನೆಗಳನ್ನು ಕಾಲಕಾಲಕ್ಕೆ ಅನುಸರಿಸಿ ಆರೋಗ್ಯಕರವಾಗಿರಲು ಅನುವಾಗುವಂತೆ ಹೆಚ್ಚು ಹೆಚ್ಚು ಜನರು ಈ ಮೊಬೈಲ್ ಆ್ಯಪ್ ಬಳಸಬೇಕು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ಚಂದ್ರಕಾಂತ್ ನಾಗಸಮುದ್ರ ಅವರು ಕೋರಿದ್ದಾರೆ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030