ಶೌಚಾಲಯ ಆಂದೋಲನ: ಪ್ರಚಾರ ವಾಹನಕ್ಕೆ ಜಿ.ಪಂ ಸಿಇಓ ಚಾಲನೆ
ಚಿತ್ರದುರ್ಗ:ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ಜಿಲ್ಲೆಯಾದ್ಯಂತ ಡಿ.20 ರವರೆಗೆ ‘ನಮ್ಮ ಶೌಚಾಲಯ ನಮ್ಮ ಗೌರವ’ ವಿಶೇಷ ಆಂದೋಲನ ಜರುಗಲಿದ್ದು, ಆಂದೋಲನದ ಪ್ರಚಾರ ವಾಹನಕ್ಕೆ ಜಿಲ್ಲಾ ಪಂಚಾಯಿತಿ ಸಿಇಓ ಎಸ್.ಜೆ.ಸೋಮಶೇಖರ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯತ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಯೋಗದಲ್ಲಿ ನಮ್ಮ ಶೌಚಾಲಯ-ನಮ್ಮ ಗೌರವ ವಿಶೇಷ ಆಂದೋಲನ ಕಾರ್ಯಕ್ರಮದ ಪ್ರಯುಕ್ತ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆ ಹಾಗೂ ಜಲಜೀವನ್ ಮಿಷನ್ ಯೋಜನೆಗಳ ಮಾಹಿತಿ ಶಿಕ್ಷಣ ಹಾಗೂ ಸಂವಹನ ಚಟುವಟಿಕೆಯ ಆಟೋ ಪ್ರಚಾರಕ್ಕೆ ಚಾಲನೆ ನೀಡಿದರು.
ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆ ಹಾಗೂ ಜಲಜೀವನ್ ಮಿಷನ್ ಯೋಜನೆ ಪ್ರಚಾರ ವಾಹನದಲ್ಲಿಯೇ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ನಮ್ಮ ಶೌಚಾಲಯ ನಮ್ಮ ಗೌರವ ಆಂದೋಲನ ಪ್ರಚಾರ ನಡೆಯಲಿದೆ. ಈ ಮೂಲಕ ಸುರಕ್ಷಿತ ನೈರ್ಮಲ್ಯ ಹಾಗೂ ಬಹಿರ್ದೇಸೆ ಮುಕ್ತ ವಾತಾವರಣ ಸೃಷ್ಠಿಸಿ, ನಿರಂತರವಾಗಿ ಶೌಚಾಲಯಗಳನ್ನು ಬಳಸಲು ಪ್ರೇರೇಪಿಸಲಾಗುವುದು. ವೈಯಕ್ತಿಕ ಗೃಹ ಹಾಗೂ ಸಮುದಾಯ ಶೌಚಾಲಯಗಳ ಬಳಕೆ ಮತ್ತು ನಿರ್ವಹಣೆ, ವೈಯಕ್ತಿಕ ಸ್ವಚ್ಚತೆ, ಘನ ತ್ಯಾಜ್ಯ ನಿರ್ವಹಣೆ, ಬೂದು ನೀರು ನಿರ್ವಹಣೆ, ಪ್ಲಾಸ್ಟಿಕ್ ನಿಷೇಧ ಕುರಿತು ಪ್ರತಿ ಗ್ರಾಮದಲ್ಲಿ ಆಟೋ ಪ್ರಚಾರ ಮಾಡಲಾಗುವುದು. ಇದರೊಂದಿಗೆ ಜಲ ಜೀವನ್ ಮಿಷನ್ ಯೋಜನೆಯ ಕಾರ್ಯಾತ್ಮಕ ನಳ ಸಂಪರ್ಕದ ಮೂಲಕ ಶುದ್ಧ ಕುಡಿಯುವ ನೀರು ಒದಗಿಸುವ ಬಗ್ಗೆ, ಕಲುಷಿತ ನೀರು ಸೇವನೆಯಿಂದ ಆಗುವ ಪರಿಣಾಮ, ಕ್ಷೇತ್ರ ಪರೀಕ್ಷಾ ಕಿಟ್ ಬಳಸಿ ನೀರಿನ ಗುಣಮಟ್ಟದ ಪರೀಕ್ಷೆಗಳನ್ನು ಕೈಗೊಳ್ಳುವ ಕುರಿತು ವಾಹನದಲ್ಲಿ ಪ್ರಚಾರ ಮಾಡಲಾಗುತ್ತದೆ.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಸಿ.ಎನ್.ಗಾಯಿತ್ರಿ ಸೇರಿದಂತೆ ಯೋಜನಾ ನಿರ್ದೇಶಕರು, ಜಿಲ್ಲಾ ಮಟ್ಟದ ಅಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಿಬ್ಬಂದಿಗಳು, ಜಿಲ್ಲಾ ಸಮಾಲೋಚಕರು, ಜಿಲ್ಲಾ ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030