ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಸಚಿವ ಡಿ.ಸುಧಾಕರ್
“ವಾಲ್ಮೀಕಿ ಮಾನವೀಯ ಮೌಲ್ಯದ ಹರಿಕಾರ”
ಚಿತ್ರದುರ್ಗ:ಸ್ವಾತಂತ್ರ್ಯ, ಸಮಾನತೆ, ಸಹೋದರತೆಯ ತತ್ವವನ್ನು ರಾಮಾಯಣ ಮಹಾಕಾವ್ಯದ ಮೂಲಕ ವಿಶ್ವಕ್ಕೆ ಸಾರಿದ ಶ್ರೀ ಮಹರ್ಷಿ ವಾಲ್ಮೀಕಿ ತತ್ವಜ್ಞಾನಿಯಾಗಿ ಮಾನವೀಯ ಮೌಲ್ಯಗಳ ಹರಿಕಾರನಾಗಿ ಕಾಣುತ್ತಾರೆ. ಇವರ ಜೀವನವೇ ಪ್ರಗತಿಯ ಹಾದಿಯಲ್ಲಿ ಹಾಗೂ ಅರಿವಿನ ಮಾರ್ಗದಲ್ಲಿ ಸಾಗಿದೆ ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಹೇಳಿದರು.
ನಗರದ ತರಾಸು ರಂಗಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವ ಮಾನವ ಶ್ರೀ ವಾಲ್ಮೀಕಿ ಜಯಂತಿಯಲ್ಲಿ ನಾಯಕ ಜನಾಂಗದವರೇ ಭಾಗವಹಿಸಿ ಅದಕ್ಕೊಂದು ಮೆರಗು ನೀಡುತ್ತಾರೆ ಎಂದರೆ ಆಶ್ಚರ್ಯವೇನಲ್ಲ. ಎಲ್ಲ ಜಯಂತಿಗಳು ಇದಕ್ಕೆ ಹೊರತಾಗಿಲ್ಲ. ಮಹಾನ್ ಮಾನವತ ವಾದಿಗಳ ಜಯಂತಿಯಲ್ಲಿ ಎಲ್ಲಾ ಜಾತಿ-ಜನಾಂಗದವರು ಸೇರುವ ವಾತಾವರಣ ನಿರ್ಮಾಣ ಮಾಡುವ ಅಗತ್ಯವಿದೆ ಎಂದು ತಿಳಿಸಿದರು.
ರಾಮಾಯಣ ಸರ್ವಕಾಲಕ್ಕೂ ಪೂಜ್ಯನೀಯ ಮಹಾಕಾವ್ಯ. ರತ್ನಾಕರನ ಬದುಕಿನಲ್ಲಿ ಮಹತ್ತರವಾದ ತಿರುವೆಂದರೆ ಬೇಟೆಯಿಂದಾಗುವ ಹಿಂಸೆ-ನೋವು-ವಿಷಾದ ಇವುಗಳಿಂದಾದ ಪರಿಣಾಮಗಳು ಅವರ ಮನಃ ಪರಿವರ್ತನೆಗೆ ಕಾರಣವಾದವು. ತ್ರೇತಾಯುಗದ ಮೂಲ ಸಂವೇದನೆಯನ್ನು ಬದುಕಿನ ಮೌಲ್ಯವನ್ನು ಸೋಲು-ಗೆಲವು, ನೋವು-ನಲಿವು ಇವೆಲ್ಲವುಗಳನ್ನು ಒಟ್ಟಾಗಿ ಹಿಡಿದಿಟ್ಟ ದಾರ್ಶನಿಕ ಶಕ್ತಿ ಶ್ರೀ ಮಹರ್ಷಿ ವಾಲ್ಮೀಕಿಯದ್ದು. ಅದು ರಾಮಾಯಣ ರೂಪದಲ್ಲಿ ಹೊರಬಿತ್ತು. ಶ್ರೀ ರಾಮನೇ ಗರ್ಭಿಣಿ ಸೀತೆಯನ್ನು ಸಂಶಯಿಸಿ ಕಾಡಿಗೆ ಅಟ್ಟಿದಾಗ ಆಕೆಗೊಂದು ನೆಲೆ ನೀಡಿದವರು ವಾಲ್ಮೀಕಿ. ಲವ-ಕುಶರ ಜನನ, ಶಿಕ್ಷಣ ಎಲ್ಲವೂ ನಡೆದಿದ್ದು ವಾಲ್ಮೀಕಿ ಕುಟೀರದಲ್ಲಿ. ಲವಕುಶರಿಗೆ ರಾಮಚರಿತೆಯನ್ನು ಕಲಿಸಿ ರಾಮನೆದುರು ಆಡಿಸಿ ತಂದೆ ಮಕ್ಕಳು ಹೆಂಡತಿಯನ್ನು ಒಂದು ಗೂಡಿಸಿದ್ದು ಶ್ರೀ ವಾಲ್ಮೀಕಿ ಎಂದು ತಿಳಿಸಿದರು.
ನಾಯಕ ಜನಾಂಗದಲ್ಲಿ ಶ್ರೀ ವಾಲ್ಮೀಕಿ ಅಷ್ಟೇ ಅಲ್ಲ. ಅನೇಕ ಪುರಾಣ ಪುರುಷರು. ವೀರ ಪರಾಕ್ರಮಿಗಳು, ಸ್ವಾತಂತ್ರ್ಯ ಹೋರಾಟಗಾರರು ಇದ್ದಾರೆ. ಅವರೆಲ್ಲರನ್ನೂ ಈ ಸಂದರ್ಭದಲ್ಲಿ ಸ್ಮರಿಸಬೇಕಾಗುತ್ತದೆ. ಪುರಾಣ ಪುರುಷ ಬೇಡರ ಕಣ್ಣಪ್ಪನು ಶಿವನಿಗೆ ಕಣ್ಣುಗಳನ್ನು ನೀಡಿದ ಮಹಾನ್ ವ್ಯಕ್ತಿ. ತನ್ನ ಹೆಬ್ಬೆರಳನ್ನೇ ಗುರು ಕಾಣಿಕೆಯಾಗಿ ದ್ರೋಣಾಚಾರ್ಯರಿಗೆ ನೀಡಿದ ಏಕಲವ್ಯ, ಶ್ರೀರಾಮನಿಗಾಗಿ ಕಾದು ಕುಳಿತು ಹಣ್ಣುಗಳನ್ನು ನೀಡಿದ ಶಬರಿ. ಅಷ್ಟೇ ಅಲ್ಲ ಭಾರತೀಯ ಸಾಂಸ್ಕತಿಕ ಪರಂಪರೆಗೆ ನಾಯಕ ಜನಾಂಗದ ಕೊಡುಗೆ ಸ್ಮರಣೀಯ ಎಂದು ಅಭಿಪ್ರಾಯಪಟ್ಟರು.
ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮಾತನಾಡಿ, ಮಹರ್ಷಿ ವಾಲ್ಮೀಕಿ ರಾಮಾಯಣ ಮಹಾಕಾವ್ಯ ಸರ್ವಕಾಲಕ್ಕೂ ಪ್ರಸ್ತುತ. ರಾಮಾಯಣ ಮಹಾಕಾವ್ಯದ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಚಿತ್ರದುರ್ಗ ನಗರದ ಮದಕರಿನಾಯಕ ವೃತ್ತದ ಸಮೀಪದಲ್ಲಿರುವ ವಾಲ್ಮೀಕಿ ಭವನಕ್ಕೆ ಇನ್ನೂ ಅನುದಾನದ ಅವಶ್ಯಕತೆ ಇದೆ ಎಂದು ಸಮಾಜದ ಮುಖಂಡರು ಗಮನಕ್ಕೆ ತಂದಿದ್ದು, ಅನುದಾನ ಮಂಜೂರಾತಿಗೆ ಅಗತ್ಯ ಕ್ರಮವಹಿಸಿ, ಮುಂದಿನ ದಿನಗಳಲ್ಲಿ ವಾಲ್ಮೀಕಿ ಜಯಂತಿಯನ್ನು ವಾಲ್ಮೀಕಿ ಭವನದಲ್ಲಿಯೇ ಆಚರಿಸೋಣ ಎಂದು ತಿಳಿಸಿದ ಅವರು, ನಗರದ ಚಳ್ಳಕೆರೆ ಗೇಟ್‍ನಲ್ಲಿ ವಾಲ್ಮೀಕಿ ವೃತ್ತ ಎಂದು ನಾಮಕರಣ ಮಾಡಲು ನಗರಸಭೆಯಿಂದ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
ಮುಂಬರುವ ಮಾರ್ಚ್ ಅಂತ್ಯದೊಳಗೆ ಸರ್ಕಾರದ ವತಿಯಿಂದ ದುರ್ಗೋತ್ಸವ ಆಚರಣೆ ಮಾಡಲಾಗುವುದು. ಈ ಬಾರಿ ದುಗೋತ್ಸವ ಆಚರಣೆ ಮಾಡುವ ಮೂಲಕ ದುರ್ಗದ ವೈಭವ, ಮದಕರಿ ನಾಯಕರ ಚರಿತ್ರೆಯನ್ನು ಇಡೀ ವಿಶ್ವಕ್ಕೆ ತಿಳಿಸುವ ಕೆಲಸ ದುಗೋತ್ಸವದಲ್ಲಿ ಆಗಲಿದೆ ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ವಾಲ್ಮೀಕಿ ರಚಿಸಿದ ರಾಮಾಯಣ ಜಗತ್ತಿನ ಶ್ರೇಷ್ಟ ಮಹಾಕಾವ್ಯ ಹಾಗೂ ಇಂದಿಗೂ ಪ್ರಸ್ತುತವಾಗಿದೆ ಎಂದು ಹೇಳಿದರು.
ಬುಡಕಟ್ಟು ಸಮುದಾಯ ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ತರಲು ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಮೂಲಕ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದ್ದು, ಈ ಯೋಜನೆಗಳ ಸದುಪಯೋಗ ಪಡೆದುಕೊಂಡು ಅಭಿವೃದ್ಧಿ ಪಥದತ್ತ ಸಾಗಬೇಕು ಎಂದು ತಿಳಿಸಿದರು.
ಹೊಸದುರ್ಗ ತಾಲ್ಲೂಕು ಕಿಟ್ಟದಾಳು ಕಲ್ಪತರು ಸಂಯುಕ್ತ ಪದವಿ ಪೂರ್ವ ಕಾಲೇಜು ಕನ್ನಡ ಉಪನ್ಯಾಸಕ ಡಾ.ಆಂಜನೇಯ ಉರ್ತಾಳ್ ಉಪನ್ಯಾಸ ನೀಡಿ, ವಾಲ್ಮೀಕಿ ಕೇವಲ ಒಂದು ಜಾತಿಗೆ ಅಥವಾ ಸಮುದಾಯಕ್ಕೆ ಸೀಮಿತವಲ್ಲ. ಅವರು ದೀನದಲಿತ, ದಮನಿತರ, ಈ ನೆಲದ ಸಂಸ್ಕøತಿಯ ಪ್ರತೀಕ ಮತ್ತು ರೂಪಕ. ವಾಲ್ಮೀಕಿ ಜಗತ್ತಿನ ಚರಿತ್ರೆಯಲ್ಲಿ ಮಿಂಚಿ ಮಿನುಗಿದ ದೃವತಾರೆ. ಮಹರ್ಷಿ ವಾಲ್ಮೀಕಿಯೂ ಆದಿಕವಿಯಾಗಿ, ತತ್ವಜ್ಞಾನಿ, ಶಿಕ್ಷಣತಜ್ಞ, ಸಂಸ್ಕøತಿಯ ಚಿಂತಕ, ರಾಜನೀತಿ ತಜ್ಞ, ಶೋಷಿತರ ನೇತಾರ, ಸಮಾಜ ಸುಧಾರಕ ಹೀಗೆ ಸರ್ವತೋಮುಖ ಅಭಿವೃದ್ಧಿಯ ಚಿಂತಕನಾಗಿ ತನ್ನ ಛಾಪು ಮೂಡಿಸಿದ್ದಾರೆ. ವಿದ್ಯೆ, ಬುದ್ದಿ, ಜ್ಞಾನ, ಶಿಕ್ಷಣ ಕೇವಲ ಒಂದು ವರ್ಗದವರಿಗೆ ಗುತ್ತಿಗೆಯಾದ ಸಂದರ್ಭದಲ್ಲಿ, ಸಮಾಜದ ಕಟ್ಟ ಕಡೆಯ ತಳ ಸಮುದಾಯದಿಂದ ಬಂದಂತಹ ಮಹರ್ಷಿ ವಾಲ್ಮೀಕಿ ಭಾರತಕ್ಕೆ ಮೊಟ್ಟ ಮೊದಲಿಗೆ ರಾಮಾಯಣವೆಂಬ ಮಹಾಕಾವ್ಯವನ್ನು ಕೊಟ್ಟಿದ್ದಾರೆ. ಜನ-ಮೆಚ್ಚಿದ, ಮನ-ಮೆಚ್ಚಿದ ಇಂತಹ ಮಹಾಕಾವ್ಯವನ್ನು ಜಗತ್ತಿನ ಎಲ್ಲಾ ಸರ್ವ ಧರ್ಮಿಯರು ಕೂಡ ಒಪ್ಪಿ ಅಪ್ಪಿಕೊಂಡಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಸಿ.ಚಾರ್ವಿ ಅವರಿಗೆ ರೂ.1 ಲಕ್ಷ ಚೆಕ್‍ನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ವಿತರಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಸಮಾಜದ ಸಾಧಕರಾದ ದಿನೇಶ್ ಗೌಡಗೆರೆ, ತಿಪ್ಪೇಸ್ವಾಮಿ, ಸಿರುವಲ್ಲಪ್ಪ, ಹನುಮಂತಪ್ಪ ಅವರಿಗೆ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಲಾಯಿತು ಹಾಗೂ ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ, ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಬಿ.ಎನ್.ಸುಮಿತಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್‍ಪೀರ್, ಸದಸ್ಯ ಅಂಜಿನಪ್ಪ, ನಗರಸಭೆ ಸದಸ್ಯ ದೀಪಕ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ನಗರಸಭೆ ಪೌರಾಯುಕ್ತೆ ರೇಣುಕಾ, ಜಿಲ್ಲಾ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ ಸೇರಿದಂತೆ ಜಿಲ್ಲಾಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು, ಸಮಾಜದ ಮುಖಂಡರು ಇದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030