ಶ್ರೀ ಗವಿಸಿದ್ದೇಶ್ಚರ ಜಾತ್ರಾ ಮಹೋತ್ಸವದ ನಿಮಿತ್ತ “ವಿಕಲಚೇತನರ ನಡೆ ಸಕಲಚೇತನದ ಕಡೆ” ಜಾಗೃತಿ ನಡಿಗೆ
ಕೃತಕ ಅಂಗಾಂಗ ಜೋಡಣೆ ಬೃಹತ್ ಜಾಗೃತಿ ಅಭಿಯಾನಕ್ಕೆ ಜಿಲ್ಲಾಧಿಕಾರಿ ನಲಿನ್ ಅತುಲ್ ಚಾಲನೆ
ಕೊಪ್ಪಳ : ಶ್ರೀ ಗವಿಸಿದ್ದೇಶ್ಚರ ಜಾತ್ರಾ ಮಹೋತ್ಸವ-2025ರ ಅಂಗವಾಗಿ ‘ಸಕಲ ಚೇತನ’ ಎಂಬ ಶೀರ್ಷಿಕೆಯ “ವಿಕಲ ಚೇತನನ ನಡೆ ಸಕಲ ಚೇತನದ ಕಡೆ” ಎಂಬ ಘೋಷವಾಕ್ಯದೊಂದಿಗೆ ಶನಿವಾರ ಕೊಪ್ಪಳ ನಗರದಲ್ಲಿ ಹಮ್ಮಿಕೊಂಡ ಕೃತಕ ಅಂಗಾಂಗ ಜೋಡಣೆ ಬೃಹತ್ ಜಾಗೃತಿ ನಡಿಗೆ ಅಭಿಯಾನಕ್ಕೆ ಜಿಲ್ಲಾಧಿಕಾರಿ ನಲಿನ್ ಅತುಲ್ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಜಿಲ್ಲಾಧಿಕಾರಿಗಳು ಮಾತನಾಡಿ, ದಕ್ಷಿಣ ಭಾರತದ ಕುಂಭಮೇಳ ಖ್ಯಾತಿಯ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಹತ್ತು ದಿನಗಳ ಅವಧಿಯಲ್ಲಿ 20 ಲಕ್ಷ ಹಾಗೂ ರಥೋತ್ಸವಕ್ಕೆ ಐದು ಲಕ್ಷ ಜನ ಸೇರುವುದು ಹೆಮ್ಮೆಯ ವಿಷಯ. ಪ್ರತಿ ವರ್ಷ ಒಂದು ಧ್ಯೇಯ ವಾಕ್ಯದೊಂದಿಗೆ ಆರಂಭವಾಗುವ ಜಾತ್ರೆಯ ನಡೆ ಮಾದರಿಯಾಗಿದೆ. ಈ ಹಿನ್ನೆಯಲ್ಲಿ ಈ ವರ್ಷ `ಸಕಲಚೇತನ’ ಎಂಬ ಸಂಕಲ್ಪದಡಿ ಕೃತಕ ಅಂಗಾಂಗ ಜೋಡಣೆ ಕುರಿತು ಅರಿವು ಮೂಡಿಸಲಾಗುತ್ತಿದೆ. ಅಂಗನವಾಡಿಯಿಂದಲೇ ಜಿಲ್ಲೆಯ ಮಕ್ಕಳಲ್ಲಿ ಅಂಗವಿಕಲತೆ ಪತ್ತೆಹಚ್ಚಿ ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಮಾತನಾಡಿ, ವಿಕಲಚೇತನರಿಗೆ ಕೊರಗು ಬರದಂತೆ ಆತ್ಮ ಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಅಭಿನವ ಗವಿ ಶ್ರೀಗಳು ಮಾಡುತ್ತಿರುವ ಕಾರ್ಯ ಇಡೀ ದೇಶಕ್ಕೆ ಮಾದರಿಯಾಗಿದೆ. ಶಿಕ್ಷಣ, ಆಹಾರ, ವಸತಿ, ಜಲ ಸಂರಕ್ಷಣೆ ಸೇರಿದಂತೆ ಅನೇಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ಮಹತ್ವ ಸಾರುತ್ತಿರುವುದು ಜಿಲ್ಲೆಯ ಹೆಗ್ಗಳಿಕೆಯಾಗಿದೆ ಎಂದರು.
ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮೀಜಿ ಅವರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್. ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಶಾಖೆಯ ಚೇರಮನ್ ವಿಜಯಕುಮಾರ, ಶ್ರೀ ಮಹಾವೀರ ಸಂಸ್ಥೆಯ ಮಹೇಂದ್ರ ಸಿಂಗ್ವಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಗದೀಶ, ಕೊಪ್ಪಳ ಡಿವೈಎಸ್ಪಿ ಮುತ್ತಣ್ಣ ಸವರಗೋಳ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕೊಪ್ಪಳ ಜಿಲ್ಲಾ ಶಾಖೆಯ ಚೇರಮನ್ ಸೋಮರೆಡ್ಡಿ ಅಳವಂಡಿ ಅವರು ಕಾರ್ಯಕ್ರಮ ನಿರೂಪಿಸಿದರು.
ಕೊಪ್ಪಳ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು (ತಾಲೂಕು ಕ್ರೀಡಾಂಗಣ)ದಿಂದ ಆರಂಭವಾದ ಕೃತಕ ಅಂಗಾಂಗ ಜೋಡಣೆ ಜಾಗೃತಿ ನಡೆಗೆ ಅಶೋಕ ವೃತ್ತ, ಗಡಿಯಾರ ಕಂಬದ ಮೂಲಕ ಶ್ರೀ ಗವಿ ಮಠದವರೆಗೆ ನಡೆಯಿತು. ಇದರಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಕೊಪ್ಪಳ, ಭಾಗ್ಯನಗರದ ವಿವಿಧ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ, ವಿಕಲಚೇತನರ ನಡೆ ಸಕಲಚೇತನದ ಕಡೆ, ಅನುಕಂಪ ಬೇಡ-ಅವಕಾಶ ಕೊಡಿ ಹಾಗೂ ಇತರೆ ಘೋಷಣೆಗಳನ್ನು ಕೂಗಿದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030